ಜಮ್ಮು ಮತ್ತು ಕಾಶ್ಮೀರ: ಹೊಸ ಕೃಷಿ ಕಾನೂನಿನಡಿಯಲ್ಲಿ ರೈತರು ತಮ್ಮ ಜಮೀನಿನ ಮಾಲೀಕತ್ವವನ್ನು ಕಳೆದುಕೊಳ್ಳುತ್ತಾರೆ ಎಂಬ ವದಂತಿಗಳನ್ನು ಅಲ್ಲಗಳೆದಿರುವ ಕೇಂದ್ರ ಕೃಷಿ ಸಚಿವ ಜಿತೇಂದ್ರ ಸಿಂಗ್, "ಜಮೀನು ಕಬಳಿಕೆದಾರರು" ರೈತರಿಂದ ಕಾನೂನುಬಾಹಿರವಾಗಿ ತೆಗೆದುಕೊಂಡ ಭೂಮಿಯನ್ನು ಕಳೆದುಕೊಳ್ಳಬಹುದೇ ವಿನಃ ನಿಜವಾದ ಕೃಷಿಕರು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಹೊಸ ಕೃಷಿ ಕಾನೂನಿನ ಪ್ರಕಾರ, ರೈತರ ಮಾಲೀಕತ್ವ ಮತ್ತು ನೋಂದಣಿ ಪತ್ರಗಳನ್ನು ರದ್ದುಗೊಳಿಸಲಾಗುವುದು ಎಂಬ ಬಗ್ಗೆ ಕತುವಾ ಜಿಲ್ಲೆಯಲ್ಲೂ ವದಂತಿಗಳನ್ನು ಹರಡಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ರು. ಮುಗ್ಧ ರೈತರಿಂದ ಭೂಮಿಯನ್ನು ಅಕ್ರಮವಾಗಿ ಅಥವಾ ಬಲವಂತವಾಗಿ ಕಿತ್ತುಕೊಂಡು ಅದರ ಮೇಲೆ ತಮ್ಮ ಬಂಗಲೆಗಳನ್ನು ಅಥವಾ ವಾಣಿಜ್ಯ ಸಂಸ್ಥೆಗಳನ್ನು ನಿರ್ಮಿಸಿದವರು ರೈತರಲ್ಲಿ ಈ ಬಗೆಯ ಇಲ್ಲಸಲ್ಲದ ಅನುಮಾನಗಳು ಮತ್ತು ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದರು.
ರೋಶ್ನಿ ಭೂ ಹಗರಣ ಮತ್ತು ಇತರ ಭೂ ಹಗರಣಗಳ ವಿರುದ್ಧ ಕೇಂದ್ರ ಕೈಗೊಂಡ ಕ್ರಮಗಳು ರೈತರಿಗೆ ಭೂ ಮಾಲೀಕತ್ವದ ಹಕ್ಕುಗಳನ್ನು ಪುನಃಸ್ಥಾಪಿಸಲು ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದ್ರು. ಹೀಗಾಗಿ ನಿಜವಾದ ರೈತರ ಭೂಮಿಗೆ ಕಳೆದುಕೊಳ್ಳುವ ಆತಂಕ ಬೇಡ ಆದರೆ, "ಕೃಷಿಕರಲ್ಲದವರು" ಆಕ್ರಮಿಸಿಕೊಂಡಿರುವ ಕೃಷಿ ಭೂಮಿಯನ್ನು ಹಿಂಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ಕೇಂದ್ರ ಸರ್ಕಾರವು ಒಂದರ ನಂತರ ಒಂದರಂತೆ ರೈತರ ಹಿತದೃಷ್ಟಿಯಿಂದಲೇ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸಿಂಗ್ ಇದೇ ವೇಳೆ ಹೇಳಿದ್ರು. ಹೊಸ ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರದ ಪ್ರಜಾಪ್ರಭುತ್ವೀಕರಣ ಮತ್ತು 'ಒಂದು ರಾಷ್ಟ್ರ-ಒಂದು ಕೃಷಿ ಮಾರುಕಟ್ಟೆ'ಯ ಪರಿಕಲ್ಪನೆಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಸಿಂಗ್ ಬಣ್ಣಿಸಿದ್ರು.
ಓದಿ: ಜ.1ರಿಂದ ಬದಲಾಗುವ ಈ 10 ರೂಲ್ಸ್ ಬಗ್ಗೆ ಇರಲಿ ಎಚ್ಚರ : ಸ್ವಲ್ಪ ಯಾಮಾರಿದ್ರೂ ಜೇಬಿಗೆ ಕತ್ತರಿ!!