ಫರಿದಾಬಾದ್ (ಹರಿಯಾಣ): ನವರಾತ್ರಿ ನಿಮಿತ್ತ ಆಯೋಜಿಸಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಯುವತಿಯ ಮೊಬೈಲ್ ನಂಬರ್ ಕೇಳಿದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸುಮಾರು 50 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಜರುಗಿದೆ.
ನವರಾತ್ರಿ ಅಂಗವಾಗಿ ಫರಿದಾಬಾದ್ ಸೇರಿದಂತೆ ಹಲವು ನಗರದಲ್ಲಿ ದಾಂಡಿಯಾ ನೈಟ್ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ. ಅದೇ ರೀತಿಯಾಗಿ ಇಲ್ಲಿನ ಸೆಕ್ಟರ್-87 ಪ್ರಿನ್ಸೆಸ್ ಸೊಸೈಟಿಯಲ್ಲೂ ಕಳೆದ ರಾತ್ರಿ ದಾಂಡಿಯಾ ನೃತ್ಯ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುತ್ತಮುತ್ತಲಿನ ಮಹಿಳೆಯರು, ಯುವತಿಯರು ಸೇರಿ ಅನೇಕ ಜನರು ಪಾಲ್ಗೊಂಡಿದ್ದರು. ಆದರೆ, ದಾಂಡಿಯಾ ನೃತ್ಯದ ವೇಳೆ ಇಬ್ಬರು ಯುವಕರು ತಮ್ಮ 25 ವರ್ಷದ ಯುವತಿಯ ಕೈಹಿಡಿದು, ಆಕೆಯ ಮೊಬೈಲ್ ನಂಬರ್ ಕೇಳುತ್ತಾ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ದೇವರಗಟ್ಟು ಬನ್ನಿ ಉತ್ಸವ : ದಂಡ ಕಾಳಗದಲ್ಲಿ 3 ಸಾವು.. ನೂರಕ್ಕೂ ಅಧಿಕ ಮಂದಿಗೆ ಗಾಯ
ಇದನ್ನು ಗಮನಿಸಿದ ಯುವತಿಯ ತಂದೆ ಯುವಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ಆರೋಪಿತ ಇಬ್ಬರೂ ಯುವಕರು ಆಕೆಯ ತಂದೆ ಮತ್ತು ಸಹೋದರನನ್ನು ದೂರ ತಳ್ಳಿದ್ದಾರೆ. ಈ ವೇಳೆ ಆಘಾತದಿಂದ ವ್ಯಕ್ತಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಆಗ ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲೇ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ನಂತರ ಈ ಸಂಬಂಧ ಮೃತ ವ್ಯಕ್ತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ತಮ್ಮ ತಂದೆಯನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ ಹಾಗೂ ಯುವತಿಯ ಮೊಬೈಲ್ ನಂಬರ್ ಕೇಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕುಟುಂಬ ಸದಸ್ಯರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿಯ ಕೈ ಮುಟ್ಟಿದ್ದು ವಾಗ್ವಾದಕ್ಕೆ ಕಾರಣ: ಈ ಕುರಿತು ಪೊಲೀಸ್ ಅಧಿಕಾರಿ ಜಮೀಲ್ ಖಾನ್ ಪ್ರತಿಕ್ರಿಯಿಸಿ, ಫರಿದಾಬಾದ್ ಸೆಕ್ಟರ್-87 ಪ್ರಿನ್ಸೆಸ್ ಸೊಸೈಟಿಯಲ್ಲಿ ದಾಂಡಿಯಾ ನೃತ್ಯದ ವೇಳೆ ತಡರಾತ್ರಿ 50 ರಿಂದ 52 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಕುಟುಂಬ ಹಾಗೂ ಆರೋಪಿಗಳು ಪ್ರಿನ್ಸೆಸ್ ಸೊಸೈಟಿಯ ನಿವಾಸಿಗಳು ಆಗಿದ್ದಾರೆ. ಯುವತಿಯ ಕೈಮುಟ್ಟಿದ್ದ ವಿಷಯವಾಗಿ ವಾಗ್ವಾದಕ್ಕೆ ಕಾರಣವಾಗಿದೆ. ಇದರಿಂದ ತೀವ್ರ ಮಾತಿನ ಚಕಮಕಿ ನಡೆದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ತಮ್ಮ ಪೊಲೀಸ್ ತಂಡ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಬಾ ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಬಾಲಕ ಸಾವು.. ಸಂಭ್ರಮದ ಮಧ್ಯೆ ಮಡುಗಟ್ಟಿದ ಶೋಕ