ನಾಗ್ಪುರ(ಮಹಾರಾಷ್ಟ್ರ) : ದಕ್ಷಿಣ ಭಾರತದಲ್ಲಿ ಬೆಳಗ್ಗಿನ ತಿಂಡಿ ಎಂದಾಕ್ಷಣ ಕಣ್ಮುಂದೆ ಬರೋದೇ ಇಡ್ಲಿ-ಸಾಂಬರ್-ಚೆಟ್ನಿ, ಇಡ್ಲಿ-ವಡಾ. ಇದನ್ನ ತಿಂದ್ರೆ ಸುಲಭವಾಗಿ ಜೀರ್ಣವಾಗುತ್ತೆ. ಆದ್ದರಿಂದಲೇ ಅನೇಕ ಜನರು ಬ್ರೇಕ್‌ಪಾಸ್ಟ್‌ಗೆ ಇಡ್ಲಿ ಸೇವನೆ ಇಷ್ಟಪಡುತ್ತಾರೆ. ಇಡ್ಲಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿ ಇರೋದನ್ನು ನೋಡಿದ್ದೇವೆ. ಆದ್ರೆ, ಇಲ್ಲಿ ಕಪ್ಪು ಬಣ್ಣದ ಇಡ್ಲಿ ತಯಾರಿಸಿ ಗಮನ ಸಳೆಯಲಾಗುತ್ತಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಸಿವಿಲ್ ಲೈನ್ ಪ್ರದೇಶದಲ್ಲಿ ಆಂಧ್ರ ಮೂಲದ ಕುಮಾರ್ ರೆಡ್ಡಿ ಎಂಬುವರು ತಮ್ಮ ಟಿಫಿನ್ ಸೆಂಟರ್‌ನಲ್ಲಿ ಕಪ್ಪು ಬಣ್ಣದ ಇಡ್ಲಿ ತಯಾರಿಸುತ್ತಿದ್ದಾರೆ. ಇದು ಆ ಭಾಗದ ಜನರನ್ನು ಆಕರ್ಷಿಸುತ್ತಿದ್ದು, ವಿಶೇಷ ಇಡ್ಲಿ ರುಚಿ ಸವಿಯಲು ಬೇರೆ ಬೇರೆ ಸ್ಥಳಗಳಿಂದಲೂ ಇಲ್ಲಿಗೆ ಜನರು ಬರುತ್ತಿದ್ದಾರಂತೆ.
ಆಂಧ್ರಪ್ರದೇಶದ ಕುಮಾರ್ ರೆಡ್ಡಿ ಕುಟುಂಬ ಹಲವು ವರ್ಷಗಳ ಹಿಂದೆ ನಾಗ್ಪುರಕ್ಕೆ ಹೋಗಿ ಅಲ್ಲೇ ನೆಲೆಸಿದೆ. ಬಳಿಕ ನಾಗ್ಪುರದ ಸಿವಿಲ್‌ಲೈನ್ ಪ್ರದೇಶದಲ್ಲಿ ಟಿಫಿನ್ ಸೆಂಟರ್ ಆರಂಭಿಸಿ ದಕ್ಷಿಣ ಭಾರತದ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ.
ವಿವಿಧ ಬಗೆಯ ಇಡ್ಲಿ ತಯಾರಿಸಿ ಸೈ ಎನಿಸಿಕೊಂಡಿರುವ ಇವರು ಚಿಲ್ಲಿ ಪೌಡರ್ ಇಡ್ಲಿ, ಕಾರ್ನ್ ಇಡ್ಲಿ, ಕ್ಯಾರೆಟ್ ಇಡ್ಲಿ, ಚೀಸ್ ಇಡ್ಲಿ, ಚಾಕೊಲೇಟ್ ಇಡ್ಲಿ, ಪಿಜ್ಜಾ ಇಡ್ಲಿ, ಇಡ್ಲಿ ಫ್ರೈ ಹೀಗೆ ನಾನಾ ರೀತಿಯ ಇಡ್ಲಿ ತಯಾರಿಸಿ ಫೇಮಸ್ ಆಗಿದ್ದಾರೆ.
ಇದರ ಜೊತೆಗೆ ಏನಾದರೂ ಹೊಸದು ಮಾಡುವಂತೆ ಕುಮಾರ್ ರೆಡ್ಡಿಗೆ ಗೆಳೆಯರು ಸಲಹೆ ನೀಡಿದ್ದಾರೆ. ಆಗ ಮನಸ್ಸಿಗೆ ಹೊಳೆದಿದ್ದೆ ಈ ಕಪ್ಪು ಇಡ್ಲಿ ಕಲ್ಪನೆ ಎಂದು ರೆಡ್ಡಿ ಹೇಳುತ್ತಾರೆ.
ಕಪ್ಪು ಇಡ್ಲಿ ತಯಾರಿಕೆಯಲ್ಲಿ ತೆಂಗು, ಕಿತ್ತಳೆ ಸಿಪ್ಪೆ, ಬೀಟ್‌ರೂಟ್ ತಿರುಳಿನಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಹಾಗಾಗಿ, ಯಾವುದೇ ತೊಂದರೆಯಾಗುವುದಿಲ್ಲ. ಇವುಗಳಿಂದ ಇಡ್ಲಿ ರುಚಿಯೂ ಹೆಚ್ಚತ್ತೆ ಎನ್ನುತ್ತಾರೆ ಕುಮಾರ್ ರೆಡ್ಡಿ.
ವಿವಿಧ ಬಣ್ಣಗಳಲ್ಲಿ ವಿವಿಧ ರೀತಿಯ ಇಡ್ಲಿಗಳನ್ನು ಮಾಡುವಾಗ ಕಪ್ಪು ಬಣ್ಣದಲ್ಲೂ ಮಾಡಬಹುದೇ ಎಂದು ಕೆಲವು ಸ್ನೇಹಿತರು ನನ್ನನ್ನು ಕೇಳಿದರು. ನಾನು ಅದನ್ನು ಮಾಡಲು ನಿರ್ಧರಿಸಿದೆ. ನನಗೆ ಬೇಕಾಗಿರುವುದು ತೆಂಗಿನ ಚಿಪ್ಪು ಮತ್ತು ಕಿತ್ತಳೆ ಸಿಪ್ಪೆಗಳು. ಅವುಗಳನ್ನು ಚೆನ್ನಾಗಿ ಒಣಗಿಸಿ ನಂತರ ಚೆನ್ನಾಗಿ ಹುರಿಯಬೇಕು. ಬೀಟ್‌ರೂಟ್ ಗೊಜ್ಜನ್ನು ಕಲಿಸಿ ಚೆನ್ನಾಗಿ ರೋಸ್ಟ್ ಮಾಡಬೇಕು. ಮೊದ ಮೊದಲು ಇದನ್ನು ತಿನ್ನಲು ಆಸಕ್ತಿ ತೋರಿಸಲಿಲ್ಲ. ಬಳಿಕ ಇದರ ಬಗ್ಗೆ ನಂಬಿಕೆ ಬಂದ ನಂತರ ಇಷ್ಟಪಟ್ಟು ಇದನ್ನು ತಿನ್ನಲು ಜನ ಮುಂದಾದರು ಎಂದು ರೆಡ್ಡಿ ಹೇಳುತ್ತಾರೆ.
ಈ ಕಪ್ಪು ಇಡ್ಲಿ ಸವಿಯಲು ನಾಗ್ಪುರದ ಸುತ್ತಮುತ್ತಲಿನ ಜನ ಇಲ್ಲಿಗೆ ಬರುತ್ತಿದ್ದಾರೆ. ಗ್ರಾಹಕರು ಕಪ್ಪು ಇಡ್ಲಿಯ ಜೊತೆಗೆ ಇನ್ನೂ ಹೆಚ್ಚಿನ ವೆರೈಟಿಗಳನ್ನು ಬಯಸುತ್ತಾರೆ. ಎಲ್ಲಾ ಬಣ್ಣಗಳ ಜೊತೆಗೆ ಸಪ್ತರಂಗಿಯ ಹೆಸರಿನಲ್ಲಿ ಇಡ್ಲಿಯನ್ನು ಮಾಡಲಾಗುತ್ತದೆ. ಇದನ್ನು ಶೀಘ್ರದಲ್ಲೇ ತಯಾರಿಸಲಾಗುತ್ತದೆ ಎಂದು ಕುಮಾರ್ ರೆಡ್ಡಿ ವಿವರಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯಕರ ಕೂದಲು ಮತ್ತು ತ್ವಚೆಗಾಗಿ ಇಲ್ಲಿವೆ 5 ಸಸ್ಯ ತೈಲಗಳು