ಜೋಧ್ಪುರ: ಸಿಆರ್‌ಪಿಎಫ್ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ ತನ್ನ ಬಂದೂಕಿನಿಂದ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ಯೋಧ ನರೇಶ್ ಜಾಟ್ ಅವರ ದೇಹವನ್ನು ಇನ್ನೂ ಅಂತ್ಯಸಂಸ್ಕಾರ ಮಾಡಲಾಗಿಲ್ಲ. ಕುಟುಂಬಸ್ಥರು, ಪೊಲೀಸರು ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಬೇಡಿಕೆಗಳಿಗೆ ಒಪ್ಪಿಗೆ ನೀಡಿದ ನಂತರವೇ ಮೃತದೇಹವನ್ನು ತೆಗೆದುಕೊಂಡು ಹೋಗುವುದಾಗಿ ಪಟ್ಟು ಹಿಡಿದಿದ್ದಾರೆ. ಭಾನುವಾರ ಸಂಜೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ.
ಸಿಆರ್‌ಪಿಎಫ್ ಅಧಿಕಾರಿಗಳು ಯೋಧನ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಮುಂದಾದರೂ ಸಹ ಅವರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಸೋಮವಾರ ರಾತ್ರಿ 11:00 ಗಂಟೆಯವರೆಗೂ ಈ ವಿಷಯವಾಗಿ ಚರ್ಚೆ ನಡೆದಿದೆ. ಕಾನ್ಸ್ಟೇಬಲ್ ಕುಟುಂಬಸ್ಥರು ಸಿಆರ್‌ಪಿಎಫ್‌ನ ಕೆಲವು ಅಧಿಕಾರಿಗಳು ಮತ್ತು ನೌಕರರ ಹೆಸರುಗಳೊಂದಿಗೆ ಕಡವಾಡ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಇದನ್ನೂ ಓದಿ: ಕುಟುಂಬವನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಯೋಧ: ಕೊನೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮೃತ ಯೋಧನ ತಂದೆ ಲಿಖಮಾರಾಮ್ ಮಾತನಾಡಿ, ಕ್ರಮ ಕೈಗೊಳ್ಳುವವರೆಗೆ ಮೃತದೇಹವನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೇ ಆತನಿಗೆ ಚಿತ್ರಹಿಂಸೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ಕುಟುಂಬಸ್ಥರ ಆಗ್ರಹವಾಗಿದೆ. ಗ್ರಾಮದಲ್ಲಿ ನರೇಶ್ ಜಾಟ್ ಅವರ ಅಂತ್ಯಕ್ರಿಯೆಗೆ ಮುನ್ನ ಅವರ ಪತ್ನಿಗೆ ಉದ್ಯೋಗ ಮತ್ತು ಮಗಳಿಗೆ ಆಜೀವ ಶಿಕ್ಷಣದ ಜೊತೆಗೆ ಗೌರವ ರಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.