ಗೊಂಡಾ: ಕಳೆದ 22 ದಿನಗಳಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಕೋವಿಡ್ ಸೋಂಕಿಗೆ ಮೃತಪಟ್ಟಿದ್ದು, ಕುಟುಂಬಸ್ಥರು ಮಾತ್ರ ಸೋಂಕಿನಿಂದ ಸಂಭವಿಸಿದ ಸಾವಲ್ಲ ಎನ್ನುತ್ತಿದ್ದಾರೆ.
ಗೊಂಡಾದ ಚಕ್ರೌತಾ ಗ್ರಾಮದಲ್ಲಿರುವ ಅಂಜನಿ ಶ್ರೀವಾಸ್ತವ ಅವರ ಕುಟುಂಬದಲ್ಲಿ ಈ ದುರಂತ ಘಟಿಸಿದೆ. ಪ್ರತಿಜನಕ ಪರೀಕ್ಷೆಗಳಲ್ಲಿ ನೆಗೆಟಿವ್ ತೋರಿಸಿದ್ದರಿಂದ ಸತ್ತವರಲ್ಲಿ ಯಾರಾದರೂ ಕೋವಿಡ್ ಹೊಂದಿದ್ದಾರೆಂದು ನಂಬಲು ಕುಟುಂಬ ಸದಸ್ಯರು ನಿರಾಕರಿಸುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ಮಾರಕ ವೈರಸ್ನ ಲಕ್ಷಣಗಳು ಕಂಡುಬಂದಿದ್ದವು.
ಅಂಜನಿ ಅವರ ಹಿರಿಯ ಸಹೋದರ ಹನುಮಾನ್ ಪ್ರಸಾದ್ (56) ಏಪ್ರಿಲ್ 2ರಂದು ನಿಧನರಾದರು. ಹನುಮಾನ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯಕೀಯ ಚಿಕಿತ್ಸೆ ನೀಡುವ ಮೊದಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂಜನಿ ಅವರ ತಾಯಿ ಮಾಧುರಿ ದೇವಿ (75) ಏಪ್ರಿಲ್ 14ರಂದು ನಿಧನರಾದರು. ತನ್ನ ಹಿರಿಯ ಮಗನ ಸಾವಿನಿಂದ ನೊಂದು ಮೃತಪಟ್ಟಳೆಂಬುದು ಕುಟುಂಬಸ್ಥರ ವಾದ.
ಪ್ರಯಾಗರಾಜ್‌ನಲ್ಲಿ ಓದುತ್ತಿದ್ದ ಮಾಧುರಿ ದೇವಿಯ ಮೊಮ್ಮಗ ಸೌರಭ್ ಅಜ್ಜಿಯ ಸಾವಿನ ಸುದ್ದಿ ಕೇಳಿ ಮನೆಗೆ ಬಂದಿದ್ದ. ಆತ ಕಾಮಾಲೆ ರೋಗದಿಂದ ಬಳಲುತ್ತಿದ್ದ. ಆತನ ಸ್ಥಿತಿ ಹದಗೆಟ್ಟಾಗ ಗೊಂಡಾದ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಏಪ್ರಿಲ್ 16ರಂದು ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು.
ಮಗನ ನಿಧನದ ನಂತರ ಸೌರಭ್ ಅವರ ಪೋಷಕರು ಅನಾರೋಗ್ಯಕ್ಕೆ ಒಳಗಾದರು ಮತ್ತು ಇಬ್ಬರನ್ನೂ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಅವರಿಗೆ ಆಮ್ಲಜನಕ ಬೆಂಬಲದಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ಆದರೆ ಏಪ್ರಿಲ್ 22ರಂದು ತಾಯಿ ಉಷಾ ಶ್ರೀವಾಸ್ತವ (41) ನಿಧನರಾದರು. ಅವರ ಪತಿ ಅಶ್ವಿನಿ ಶ್ರೀವಾಸ್ತವ (45) ಏಪ್ರಿಲ್ 24ರಂದು ಮೃತಪಟ್ಟರು. ಇಬ್ಬರಿಗೂ ತೀವ್ರ ಜ್ವರವಿತ್ತು. ಆದರೆ, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿತ್ತು.
ಸ್ಥಳೀಯ ಬಿಜೆಪಿ ಮುಖಂಡರು ಈ ದುರಂತದ ಬಗ್ಗೆ ಗಮನಕ್ಕೆ ಬರುತ್ತಿದಂತೆ, ಜಿಲ್ಲಾಡಳಿತಕ್ಕೆ ತನಿಖೆ ಮಾಡಲು ಸೂಚಿಸಿದರು. ಆದರೆ, ಜಿಲ್ಲಾ ಅಧಿಕಾರಿಗಳು ಅಂಜನಿ ಶ್ರೀವಾಸ್ತವ ಅವರನ್ನು ಸಂಪರ್ಕಿಸಿದಾಗ, ಕುಟುಂಬ ಸದಸ್ಯರು ಸಹಜ ಸಾವೆಂಬ ಹೇಳಿಕೆ ಕೊಟ್ಟು ಅದನ್ನೇ ಸಾಧಿಸುತ್ತಿದ್ದಾರೆ.