ನೋಯ್ಡಾ : ಇಲ್ಲಿನ ಪಶ್ಚಿಮದ ಜಲಾಲ್‌ಪುರ ಗ್ರಾಮದಲ್ಲಿ ಒಂದು ಕುಟುಂಬದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಕೊರೊನಾದಿಂದ ಇಬ್ಬರು ಎದೆಯೆತ್ತರದ ಮಕ್ಕಳನ್ನು ಕಳೆದುಕೊಂಡು ತಂದೆ-ತಾಯಿ ರೋಧಿಸುವಂತಾಗಿದೆ.
ಜಲಾಲ್‌ಪುರ ಗ್ರಾಮದ ಉತರ ಸಿಂಗ್ ಅವರ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಓರ್ವ ಮಗನ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಮನೆಗೆ ಬರುವಷ್ಟರಲ್ಲಿ ಇನ್ನೋರ್ವ ಪುತ್ರ ಕೋವಿಡ್ ಜತೆಗಿನ ಹೋರಾಟದಲ್ಲಿ ಸೋತು ಶರಣಾಗಿದ್ದಾನೆ.
ಒಬ್ಬ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಕೊರೊನಾ ಸೋಂಕಿತನಾಗಿದ್ದ ಮತ್ತೋರ್ವ ಪುತ್ರನ ಸಾವು ಆಘಾತ ತಂದಿದೆ.
ಉತರ ಸಿಂಗ್ ಅವರ ಪುತ್ರ ಪಂಕಜ್ ಇದ್ದಕ್ಕಿದ್ದಂತೆ ಅಸುನೀಗಿದ್ದಾರೆ. ಪಂಕಜ್ನ ಚಿತೆಗೆ ಅಗ್ನಿ ಸ್ಪರ್ಶಿಸಿ ಮನೆಗೆ ಮರಳುತ್ತಲೇ, ಕೊರೊನಾದಿಂದ ಬಳಲುತ್ತಿದ್ದ ಮತ್ತೋರ್ವ ಮಗ ದೀಪಕ್ ಸಾವಿನ ಸುದ್ದಿಯಿಂದ ಹೆತ್ತವರ ಒಡಲಲ್ಲಿ ಸೂತಕದ ಛಾಯೆ ಮಡುಗಟ್ಟಿದೆ.
ಈ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 18 ಜನರು ಸಾವನ್ನಪ್ಪಿದ್ದು, ಮರಣ ಮೃದಂಗ ಮುಂದುವರೆದಿದೆ. ಇದರಿಂದಾಗಿ ಹಳ್ಳಿಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.