ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ದಾಖಲಿಸಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ಮುಖಂಡರಾದ ಅರ್ಜುನ್ ಸಿಂಗ್ ಮತ್ತು ಕೈಲಾಶ್ ವಿಜಯ ವರ್ಗಿಯಾ ಸೇರಿದಂತೆ ಐವರು ಬಿಜೆಪಿ ನಾಯಕರಿಗೆ ಸುಪ್ರೀಂಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.
ರಾಜಕೀಯ ಚಟುವಟಿಕೆಗಳಿಂದ ತಮ್ಮನ್ನು ದೂರವಿಡಬೇಕು ಎಂದು ಬಿಜೆಪಿ ನಾಯಕರು ಸಲ್ಲಿಸಿದ್ದ ಮನವಿಗಳ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ನ್ಯಾಯಪೀಠ, ಮುಂದಿನ ವಿಚಾರಣೆಯ ದಿನಾಂಕದವರೆಗೂ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ ಎಂದು ಹೇಳಿದೆ.
ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದಲ್ಲಿ ರಾಜಕೀಯ ಕಲಹ ಉಂಟು ಮಾಡಲಾಗುತ್ತಿದೆ. ಮುಂದೆ ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ರಾಜ್ಯವನ್ನು ಭಯೋತ್ಪಾದಕ ರಾಜ್ಯವನ್ನಾಗಿ ಮಾಡಲಾಗುತ್ತಿದೆ ಎಂದು ಅರ್ಜುನ್ ಸಿಂಗ್, ಕೈಲಾಶ್ ವಿಜಯವರ್ಗಿಯಾ, ಮುಕುಲ್ ರಾಯ್, ಸೌರಭ್ ಸಿಂಗ್, ಪವನ್ ಕುಮಾರ್ ಸಿಂಗ್ ಮತ್ತು ಕಬೀರ್ ಶಂಕರ್ ಬೋಸ್ ಆರೋಪಿಸಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, 2019ರಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಾರ್ಟಿ ಸೇರಿದ ನಂತರ ಬಿಜೆಪಿ ನಾಯಕನ ವಿರುದ್ಧ 64 ಕ್ರಿಮಿನಲ್ ಮೊಕದ್ದಮೆಗಳನ್ನ ದಾಖಲಿಸಲಾಗಿದೆ ಎಂದು ಹೇಳಿದರು. ವಾದ ಪ್ರತಿವಾದ ಆಲಿಸಿದ ಉನ್ನತ ನ್ಯಾಯಾಲಯವು ವಿಚಾರಣೆಯನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿತು.