ಚಂಡೀಗಢ (ಪಂಜಾಬ್): ಪಂಜಾಬ್ನಲ್ಲಿ ನಕಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ನೋರ್ವ ಸಿಕ್ಕಿ ಬಿದ್ದಿದ್ದಾನೆ. ಎಡಿಜಿಪಿ ಎಂದು ಹೇಳಿಕೊಂಡು ಉದ್ಯಮಿಗಳು, ಕ್ರಿಕೆಟಿಗರು ಮತ್ತು ಟ್ರಾವೆಲ್ ಏಜೆಂಟ್ಗಳಿಗೆ ಈ ಆಸಾಮಿ ವಂಚಿಸಿರುವುದು ಬಯಲಾಗಿದೆ. ಸದ್ಯ ನಕಲಿ ಅಧಿಕಾರಿ ಹಾಗೂ ಆತನ ಸಹಚರ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮ್ರಿಯಾಂಕ್ ಸಿಂಗ್ ಎಂಬಾತನೇ ಬಂಧಿತ ನಕಲಿ ಎಡಿಜಿಪಿಯಾಗಿದ್ದು, ಈತ ಚಂಡೀಗಢದ ಎಡಿಜಿಪಿ ಅಲೋಕ್ ಕುಮಾರ್ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ. ಬೇರೆ ಬೇರೆ ಕಡೆಗಳಲ್ಲಿ ಎಡಿಜಿಪಿ ಹೆಸರು ಬಳಸಿಕೊಂಡು ಜನರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಮ್ರಿಯಾಂಕ್ ಸಿಂಗ್ ಸಹಚರ ರಾಘವ್ ಗೋಯಲ್ ಕೂಡ ವಂಚನೆಯಲ್ಲಿ ಭಾಗಿಯಾಗಿದ್ದಾನೆ. ಪಂಚಕುಲದಲ್ಲಿ ಇಬ್ಬರನ್ನೂ ಬಂಧಿಸಿ ಮೊಹಾಲಿಯ 8ನೇ ಹಂತದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಈಗಾಗಲೇ ವಂಚಕರನ್ನು ನ್ಯಾಯಾಲಯ ಹಾಜರು ಪಡಿಸಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮ್ರಿಯಾಂಕ್ ಸಿಂಗ್, ಮಾಜಿ ಕ್ರಿಕೆಟಿಗ?: ಈ ವಂಚಕ ಮ್ರಿಯಾಂಕ್ ಸಿಂಗ್ ಹರಿಯಾಣದ ಮಾಜಿ ಕ್ರಿಕೆಟಿಗ ಎನ್ನಲಾಗಿದೆ. ಎಡಿಜಿಪಿ ಎಂಬ ಸೋಗಿನಲ್ಲಿ ಕ್ರಿಕೆಟಿಗ ರಿಷಬ್ ಪಂತ್ 1.5 ಕೋಟಿ ರೂ. ಮತ್ತು ಜಲಂಧರ್ ಮೂಲದ ಟ್ರಾವೆಲ್ ಏಜೆಂಟ್ಗೆ 5.76 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2021ರ ಜನವರಿ ತಿಂಗಳಲ್ಲಿ ಝೋನಲ್ ಕ್ರಿಕೆಟ್ ಅಕಾಡೆಮಿ ಶಿಬಿರದಲ್ಲಿ ರಿಷಬ್ ಪಂತ್ ಅವರನ್ನು ಮ್ರಿಯಾಂಕ್ ಸಿಂಗ್ ಭೇಟಿಯಾಗಿದ್ದ. ಆಗ ತನ್ನನ್ನು ತಾನು ಐಷಾರಾಮಿ ಕೈಗಡಿಯಾರಗಳು ಮತ್ತು ಇತರ ವಸ್ತುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಎಂದು ಹೇಳಿಕೊಂಡಿದ್ದ. ಅಲ್ಲದೇ, ರಿಷಬ್ ಪಂತ್ ಅವರಿಗೂ ತಮ್ಮೊಂದಿಗೆ ವ್ಯವಹಾರದಲ್ಲಿ ಸೇರುವಂತೆ ಕೇಳಿಕೊಂಡಿದ್ದ ಎಂದು ವರದಿಯಾಗಿದೆ.
ಈ ವಂಚಕನನ್ನು ನಂಬಿದ ರಿಷಬ್ ಪಂತ್ ಕೆಲವು ಐಷಾರಾಮಿ ಕೈಗಡಿಯಾರಗಳು ಮತ್ತು ಬ್ಯಾಗ್‌ಗಳನ್ನು ಮರು ಮಾರಾಟಕ್ಕಾಗಿ ಮ್ರಿಯಾಂಕ್‌ಗೆ ನೀಡಿದ್ದ. ಇದಕ್ಕೆ ಪ್ರತಿಯಾಗಿ ಆರೋಪಿಯು 1.5 ಕೋಟಿ ರೂಪಾಯಿಯ ಚೆಕ್ಅನ್ನು ನೀಡಿದ್ದಾನೆ. ಆದರೆ, ಆ ಚೆಕ್ ಬೌನ್ಸ್ ಆಗಿದೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಪ್ರಕರಣವೊಂದರಲ್ಲಿ ದೇಶೀಯ ವಿಮಾನ ಟಿಕೆಟ್‌ಗಳು ಮತ್ತು ಹೋಟೆಲ್ ಕೊಠಡಿಗಳನ್ನು ಬುಕ್ ಮಾಡಿ ಮ್ರಿಯಾಂಕ್ ಸಿಂಗ್ ವಂಚಿಸಿರುವುದು ಬಹಿರಂಗವಾಗಿದೆ.
ಈ ಕುರಿತು ಜಲಂಧರ್‌ನ ಟ್ರಾವೆಲ್ ಏಜೆಂಟ್ ದೂರು ನೀಡಿದ್ದಾರೆ. ಮೊಹಾಲಿಯಲ್ಲಿ ಭೇಟಿಯಾದಾಗ ನಂತರ ಮ್ರಿಯಾಂಕ್ ಸಿಂಗ್ಗಾಗಿ ವಿಮಾನ ಟಿಕೆಟ್‌ಗಳು ಮತ್ತು ಹೋಟೆಲ್ ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಅಲ್ಲದೇ, 50 ಸಾವಿರ ರೂ. ನಗದು ಹಣವನ್ನು ಪಡೆದುಕೊಂಡು 15 ದಿನಗಳಲ್ಲಿ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಮ್ರಿಯಾಂಕ್ ಹೇಳಿದ್ದ. ಆದರೆ, ನಂತರದಲ್ಲಿ ಮ್ರಿಯಾಂಕ್ ಸಿಂಗ್ ಪರಾರಿಯಾಗಿದ್ದಾನೆ ಎಂದು ಟ್ರಾವೆಲ್ ಏಜೆಂಟ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಆರೋಪಿಗಳು ಮುಂಬೈನ ಮತ್ತೊಬ್ಬ ಉದ್ಯಮಿಗೆ ಇದೇ ರೀತಿ ಸುಮಾರು 6 ಲಕ್ಷ ರೂ. ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಈ ವೇಳೆ ಉದ್ಯಮಿಯೊಬ್ಬರು ಸಂಪರ್ಕಕ್ಕೆ ಬಂದಿದ್ದರು. ಉದ್ಯಮಿಯಿಂದ ಹಣ ಪಡೆದಿದ್ದ ಈ ಮೋಸಗಾರರು ಮರಳಿ ಹಣ ಕೇಳಿದಾಗ ಕರೆ ಮಾಡುವುದನ್ನು ನಿಲ್ಲಿಸಿ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕರ್ನಾಟಕ ಮೂಲದ ನಕಲಿ ಸೇನಾಧಿಕಾರಿ ಪುಣೆಯಲ್ಲಿ ಬಂಧನ