ಮುಂಬೈ: ದುಬೈನಿಂದ ಮುಂಬೈಗೆ ಮೂವರು ಭಯೋತ್ಪಾದಕರು ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿ ವಂಚನೆ ಮಾಡಿದ್ದ ವ್ಯಕ್ತಿಯನ್ನು ನಗರ ಭಯೋತ್ಪಾದನಾ ನಿಗ್ರಹ ತಂಡ ಬಂಧಿಸಿದೆ. ಇಂದು ಮಧ್ಯಾಹ್ನ 12:05 ಕ್ಕೆ ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಯಲ್ಲಿರುವ ದಕ್ಷ್ ನಾಗರಿಕ್ ಬೂತ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು.
ಕರೆ ಮಾಡಿದ ವ್ಯಕ್ತಿ ತನ್ನ ಹೆಸರು ರಾಜಾ ಥೋಂಗೆ ಎಂದು ಹೇಳಿದ್ದಾನೆ. ದುಬೈನಿಂದ ಶುಕ್ರವಾರ ಮುಂಜಾನೆ ಮೂವರು ಉಗ್ರರು ಮುಂಬೈಗೆ ಬಂದಿಳಿದ್ದಾರೆ. ಅವರಲ್ಲಿ ಒಬ್ಬನ ಹೆಸರು ಮುಜೀಬ್ ಸೈಯದ್. ಆತ ಪಾಕಿಸ್ತಾನಕ್ಕೆ ಸಂಬಂಧಿಸಿದವನು ಎಂದು ಹೇಳಿ, ಎರಡು ಮೊಬೈಲ್ ಸಂಖ್ಯೆಗಳು, ಒಂದು ಒಂಬತ್ತು ಅಂಕಿ ಸಂಖ್ಯೆ ಮತ್ತು ಎಂ.ಎಚ್.ಕಾರ್ ನಂಬರ್ 16 BZ 8032 ಅನ್ನು ಪೊಲೀಸರಿಗೆ ನೀಡಿದ್ದ. ಇದರ ಜೊತೆಗೆ ನಾನು ಪುಣೆಯಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ.
ಪೊಲೀಸರು ಮತ್ತೊಮ್ಮೆ ಆತನಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು ಯತ್ನಿಸಿದ್ದು, ಆತ ಕರೆಗೆ ಸಿಕ್ಕಿಲ್ಲ. ಕೊನೆಗೆ ಸ್ಥಳೀಯ ಎಲ್ಲ ಠಾಣೆಗಳಿಗೂ ಮಾಹಿತಿ ನೀಡಿ ಜಾಗೃತರಾಗಿರುವಂತೆ ಸೂಚಿಸಿದ್ದಾರೆ. ನಗರದ ಪ್ರಮುಖ ಹಾಗೂ ಅತಿ ಸೂಕ್ಷ್ಮ ಹಾಗೂ ಜನಸಂದಣಿ ಇರುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಹಾಗೂ ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಮುಂಬೈ ಪೊಲೀಸರು ಹೈ ಅಲರ್ಟ್ ಘೋಷಿಸಿ ಕರೆ ಬಗ್ಗೆ ರಾಜ್ಯ ಮತ್ತು ಕೇಂದ್ರದ ಗುಪ್ತಚರ ಮತ್ತು ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಿದ್ದರು.
ಆರೋಪಿ ರಾಜ್ ಥೊಂಗೆ ಕರೆ ಮಾಡಿದ ಮೊಬೈಲ್ ನಂಬರ್ ಆಧರಿಸಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಕರೆ ಮಾಡಲು ಬಳಸಿದ ಸಂಖ್ಯೆ ಬೀಡ್ ಜಿಲ್ಲೆಯ ಅಷ್ಟಿಯಲ್ಲಿರುವ ಒಬ್ಬ ವ್ಯಕ್ತಿಯ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ. ಪೊಲೀಸರು ವ್ಯಕ್ತಿಯನ್ನು ವಿಚಾರಿಸಿದಾಗ ತಾನು ಅಂತಹ ನಂಬರ್ ಖರೀದಿಸಿಲ್ಲ ಎಂದಿದ್ದಾನೆ. ಅಲ್ಲದೆ, ಕರೆಯಲ್ಲಿ ಹೆಸರು ನಮೂದಿಸಿರುವ ರಾಜಾ ಥೋಂಗೆ ಮತ್ತು ಮುಜೀಬ್ ಸೈಯದ್ ಎಂಬ ವ್ಯಕ್ತಿಯಾಗಲಿ, ಮೊಬೈಲ್ ಸಂಖ್ಯೆ, ಕಾರ್ ನಂಬರ್ ಹೊಂದಿರುವವರು ನನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದೆ, ಕರೆ ಮಾಡಿದಾತ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ರಾಜಾ ಥೋಂಗೆ ಎಂಬ ವ್ಯಕ್ತಿಯ ಗುರುತು ಪೊಲೀಸರಿಗೆ ಎಲ್ಲಿಯೂ ಸಿಕ್ಕಿರಲಿಲ್ಲ. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಇದೊಂದು ಹುಸಿ ಕರೆ ಎಂದು ಬೆಳಕಿಗೆ ಬಂದಿದೆ. ಅಂತಿಮವಾಗಿ ಕರೆ ಮಾಡಿದ್ದ ಆರೋಪಿಯನ್ನು ಎಟಿಎಸ್ ಪತ್ತೆ ಹಚ್ಚಿ ಬಂಧಿಸಿತು.
ರಾಜಾ ಥೋಂಗೆ ಎಂಬ ಹೆಸರಲ್ಲಿ ಕರೆ ಮಾಡಿದ್ದ ಆರೋಪಿಯ ಹೆಸರು ಯಾಸಿನ್ ಸೈಯದ್. ಈತ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಮೂವರು ಭಯೋತ್ಪಾದಕರ ಬಗ್ಗೆ ಸುಳ್ಳು ಮಾಹಿತಿ ನೀಡಿರುವ ಕುರಿತು ತನಿಖೆ ನಡೆಸುತ್ತಿದ್ದಾರೆ. ಈತ ಯಾತಕ್ಕಾಗಿ ಸುಳ್ಳು ಹೆಸರು ನೀಡಿ ಕರೆ ಮಾಡಿದ್ದಾನೆ ಮತ್ತು ವದಂತಿ ಹರಡುವ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಪೊಲೀಸರು ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಸುಳ್ಳು ಮಾಹಿತಿ ನೀಡಿ ಹುಸಿ ಕರೆ ಮಾಡಿದವನ ವಿರುದ್ಧ ಐಪಿಸಿ ಸೆಕ್ಷನ್ 505 (1), 505 (2) ಮತ್ತು 182 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: 6 ವರ್ಷದಲ್ಲಿ 178 ಎನ್‌ಕೌಂಟರ್: ದುಷ್ಕರ್ಮಿಗಳಿಗೆ ನಡುಕ ಹುಟ್ಟಿಸಿದ ಯೋಗಿ ಸರ್ಕಾರ