ಭೋಪಾಲ್(ಮಧ್ಯಪ್ರದೇಶ) : ಒಂದಲ್ಲ, ಎರಡಲ್ಲ.. 20 ವರ್ಷದಿಂದ ಮದ್ಯ ಸೇವಿಸುತ್ತಿದ್ದೇನೆ. ಆಗ ಒಂದು ಕ್ವಾರ್ಟರ್ ಕುಡಿದರೆ ನಶೆ ಏರುತ್ತಿತ್ತು. ಆದರೆ, ಈಗ ಎರಡು ಕ್ವಾರ್ಟರ್ ಕುಡಿದರೂ ನಶೆ ಏರುತ್ತಿಲ್ಲ. ಮದ್ಯದಲ್ಲೂ ಕಲಬೆರಕೆ ಮಾಡಲಾಗುತ್ತಿದೆ. ಹೀಗೆಂದು ಮದ್ಯ ಪ್ರಿಯನೋರ್ವ ಗೃಹ ಸಚಿವರು ಮತ್ತು ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದು ದೂರು ನೀಡಿದ್ದಾನೆ.
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಇಂತಹ ವಿಚಿತ್ರ ಪ್ರಕರಣ ನಡೆದಿದೆ. ಇಲ್ಲಿನ ಬಹದ್ದೂರ್ ಗಂಜ್ ನಿವಾಸಿ ಲೋಕೇಂದ್ರ ಸೋಥಿಯಾ ಎಂಬಾತ ಏಪ್ರಿಲ್ 12ರಂದು ಇಂದೋರ್‌ನಲ್ಲಿ ಮದ್ಯದ ಅಂಗಡಿಯಲ್ಲಿ ನಾಲ್ಕು ಕ್ವಾರ್ಟರ್ ದೇಸಿ ಮದ್ಯ ಖರೀದಿಸಿದ್ದ.
ಎರಡು ಬಾಟಲಿಗಳನ್ನು ಅವತ್ತೇ ಕುಡಿದು ಖಾಲಿ ಮಾಡಿದ್ದ. ಆದರೂ, ಆತನಿಗೆ ನಶೆಯೇ ಏರಿಲ್ಲ. ಹೀಗಾಗಿ, ಮದ್ಯದಲ್ಲಿ ಕಲಬೆರಕೆ ಇದೆ ಎಂದು ನನಗೆ ತಕ್ಷಣವೇ ಅರಿವಿಗೆ ಬಂದಿದೆ ಎಂದು ಹೇಳಿಕೊಂಡಿದ್ದಾನೆ.
ಅಲ್ಲದೇ, ಅದೇ ದಿನ ಮದ್ಯ ನಶೆ ಏರಿಲ್ಲ ಎಂದು ಅಂಗಡಿ ಮಾಲೀಕರಿಗೆ ದೂರು ನೀಡಲು ಅಂಗಡಿಗೆ ಹೋಗಿದ್ದ. ಆದರೆ, ಅಲ್ಲಿನ ಸಿಬ್ಬಂದಿ ಆತನನ್ನು ಬೈದು ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈ ಮದ್ಯಪ್ರಿಯ ಗೃಹ ಸಚಿವರು ಮತ್ತು ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದ್ದಾನೆ. ಕುಡುಕರಿಗೆ ನ್ಯಾಯ ಬೇಕೆಂದು ಪತ್ರದಲ್ಲಿ ಆತ ಆಗ್ರಹಿಸಿದ್ದಾನೆ.
ಸಾಕ್ಷ್ಯಕ್ಕಾಗಿ 2 ಬಾಟಲಿ ಇವೆ : ಎರಡು ಕ್ವಾರ್ಟರ್ ಕುಡಿದ ಮೇಲೆ ನಶೆ ಏರಿಲ್ಲ. ಇದು ಕಲಬೆರಕೆ ಮದ್ಯ ಎಂಬ ಸಾಕ್ಷ್ಯಕ್ಕಾಗಿ ಅಂದು ಖರೀದಿಸಿದ್ದ ಇನ್ನೂ ಎರಡು ಬಾಟಲಿಗಳನ್ನು ಹಾಗೆ ಇಟ್ಟುಕೊಂಡಿದ್ದಾನೆ. ಇವುಗಳನ್ನು ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸಿದರೆ ಮದ್ಯದಲ್ಲಿ ನೀರು ಬೆರೆಸಲಾಗಿದೆಯೇ ಎಂಬುದು ಗೊತ್ತಾಗಲಿದೆ. ಹೀಗಾಗಿ, ಇದನ್ನು ತನಿಖೆಗೆ ಒಳಪಡಿಸುವಂತೆ ಲೋಕೇಂದ್ರ ಸೋಥಿಯಾ ತನ್ನ ಪತ್ರದಲ್ಲಿ ಒತ್ತಾಯಿಸಿದ್ದಾನೆ.
ಅಷ್ಟೇ ಅಲ್ಲ, ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳು ಕಲಬೆರಕೆಯಾಗುತ್ತಿದೆ ಎಂದು ನಾವು ಕೇಳಿದ್ದೇವೆ. ಈಗ ಮದ್ಯದಲ್ಲೂ ಅದೇ ರೀತಿ ಮಾಡುತ್ತಿದ್ದಾರೆ. ಅದು ತುಂಬಾ ಆತಂಕಕಾರಿ. ಈ ಬಗ್ಗೆ ಗ್ರಾಹಕರ ವೇದಿಕೆಯಲ್ಲೂ ದೂರು ನೀಡುತ್ತೇನೆ ಎಂದು ಹೇಳಿದ್ದಾನೆ. ಇತ್ತ, ಉಜ್ಜಯಿನಿ ಅಬಕಾರಿ ಆಯುಕ್ತರು ಇದರಿಂದ ಎಚ್ಚೆತ್ತುಕೊಂಡಿದ್ದು, ತನಿಖೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಗರ್ಭನಿರೋಧಕ ವಿಧಾನಗಳ ಬಳಕೆ ಮೇಘಾಲಯ, ಮಿಜೋರಾಂ, ಬಿಹಾರದಲ್ಲಿ ಅತಿ ಕಡಿಮೆ: ವರದಿ