ಲಖನೌ: ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದ ನೀಟ್ ಪರೀಕ್ಷೆ ಆಕಾಂಕ್ಷಿ ವಿದ್ಯಾರ್ಥಿಯ ಜೀವವನ್ನು ಫೇಸ್‌ಬುಕ್ ಕಾಪಾಡಿದೆ. ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ವಿಷಯವನ್ನು ತಕ್ಷಣವೇ ಸ್ಥಳೀಯ ಡಿಜಿಪಿ ಕೇಂದ್ರ ಕಚೇರಿಯಲ್ಲಿರುವ ಸೋಷಿಯಲ್ ಮೀಡಿಯಾ ಸೆಂಟರ್ಗೆ ಫೇಸ್‌ಬುಕ್ ತಿಳಿಸಿತ್ತು. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಯ ಜೀವ ಕಾಪಾಡಿದ್ದಾರೆ.
ಆತ್ಮಹತ್ಯೆ ಯತ್ನ ಪ್ರಕರಣಗಳ ಮೇಲೆ ನಿರಂತರವಾಗಿ ನಿಗಾ ಇಡುವ ಮೂಲಕ ಜೀವಗಳನ್ನು ಉಳಿಸುವ ಉದ್ದೇಶದಿಂದ ಉತ್ತರಪ್ರದೇಶ ಪೊಲೀಸ್ ಇಲಾಖೆ ಮತ್ತು ಫೇಸ್ ಬುಕ್ ನಡುವೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ಇದರ ನಿಮಿತ್ತ ಯಾವುದೇ ಆತ್ಮಹತ್ಯೆ ಯತ್ನದ ಬಗ್ಗೆ ಮಾಹಿತಿ ತಿಳಿಯುತ್ತಲೇ ಫೇಸ್‌ಬುಕ್ ಪೊಲೀಸ್ ಇಲಾಖೆಗೆ ತುರ್ತು ಸಂದೇಶ ರವಾನಿಸುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದರು.
ಆತ್ಮಹತ್ಯೆಗೆ ಸಂಬಂಧಿಸಿದ ಎಲ್ಲ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ತಕ್ಷಣ ಸ್ಪಂದಿಸುವಂತೆ ಮತ್ತು ಅಂಥ ಸಂದೇಶಗಳನ್ನು ಪೋಸ್ಟ್ ಮಾಡುವವರ ಜೀವ ಉಳಿಸಲು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ನಾವು ಎಲ್ಲ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಹಾಕಿದ್ದ 29 ವರ್ಷದ ಯುವಕನ ಮನೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಚಿರಂಜೀವ ನಾಥ್ ಸಿನ್ಹಾ ತಕ್ಷಣವೇ ಧಾವಿಸಿ ಆತನ ಜೀವ ಉಳಿಸಿದ್ದಾರೆ.
ಆ ವ್ಯಕ್ತಿ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಮತ್ತು ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾನೆ. ನೀಟ್‌ನಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗದೇ ಮಾನಸಿಕ ಉದ್ವೇಗಕ್ಕೆ ಒಳಗಾಗಿ ಆತ ಈ ಹೆಜ್ಜೆ ಇಟ್ಟಿದ್ದು, ಇದು ಜೀವನದ ಅಂತ್ಯವಲ್ಲ ಎಂದು ಆತನಿಗೆ ಸಲಹೆ ನೀಡಲಾಗಿದೆ. ನಾವು ಅವರಿಗೆ ಪೊಲೀಸ್ ಮೊಬೈಲ್ ಸಂಖ್ಯೆ ಒದಗಿಸಿದ್ದೇವೆ ಮತ್ತು ಅವರಿಗೆ ಯಾವುದೇ ಸಮಸ್ಯೆ ಇದ್ದಾಗ ತಕ್ಷಣ ಕರೆ ಮಾಡುವಂತೆ ತಿಳಿಸಿದ್ದೇವೆ ಎಂದು ಸಿನ್ಹಾ ಹೇಳಿದರು.
ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾರಾದರೂ ಸಂದೇಶವನ್ನು ಪೋಸ್ಟ್ ಮಾಡಿದಾಗ ಫೇಸ್‌ಬುಕ್ ಉತ್ತರ ಪ್ರದೇಶ ಪೊಲೀಸರಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಚ್ಚರಿಕೆಯ ಸಂದೇಶ ನೋಡಿ ಪೊಲೀಸರು ಈ ಹಿಂದೆ ಹಲವಾರು ಜನರ ಪ್ರಾಣ ಉಳಿಸಿದ್ದಾರೆ ಎಂದು ಅವರು ಹೇಳಿದರು. ಇತ್ತೀಚೆಗಷ್ಟೇ ಪ್ರಯಾಗ್‌ರಾಜ್ ಪೊಲೀಸರು ಫೇಸ್‌ಬುಕ್‌ನಲ್ಲಿ ತನ್ನ ಜೀವನವನ್ನು ಕೊನೆಗೊಳಿಸುವುದಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರಾಂಡ್: 'ಮೆಟಾ' ಹೆಸರು ಘೋಷಿಸಿದ ಮಾರ್ಕ್