ಹೈದರಾಬಾದ್ : ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದೀಗ ಪೊಲೀಸ್ ಠಾಣೆಯೊಂದರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಅಪರಿಚಿತ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಹೈದರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆಸಿಫ್‌ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ರಾತ್ರಿ ಫೇಸ್‌ಬುಕ್ ಅಕೌಂಟ್ ಚೆಕ್ ಮಾಡಿದಾಗ ವಿಷಯ ತಿಳಿದು ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಖಾತೆ ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
"ಆಸಿಫ್‌ನಗರ ಠಾಣೆಯ ಕಾನ್ಸ್ಟೇಬಲ್ ರವೀಂದರ್ ಬಾಬು ಅವರು ಠಾಣೆಯ ಅಧಿಕೃತ ಫೇಸ್ ಬುಕ್ ಖಾತೆಗೆ ಬುಧವಾರ ರಾತ್ರಿ ಲಾಗ್ ಇನ್ ಆಗಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಕೆಲ ನಿಮಿಷಗಳ ನಂತರ ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದ್ದು, ಆಗ ಕೂಡ ಸಮಸ್ಯೆ ಕಂಡು ಬಂದಿದೆ. ಬಳಿಕ ತಮ್ಮ ಫೋನ್‌ನಲ್ಲಿ ಖಾತೆ ಪರಿಶೀಲಿಸಿದಾಗ ಐದು ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಕೂಡಲೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅಕೌಂಟ್ ಹ್ಯಾಕ್ ಆಗಿರುವುದು ಪತ್ತೆಯಾಗಿದೆ. ಈಗಾಗಲೇ ವಿಡಿಯೋಗಳನ್ನು ಅಳಿಸಲಾಗಿದ್ದು, 6,000 ಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಮಾಡುತ್ತಿದ್ದಾರೆ" ಎಂದು ಇನ್ಸ್ಪೆಕ್ಟರ್ ಎಸ್ ನವೀನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪತ್ನಿ ಮೆಚ್ಚಿಸಲು ಪಾಸ್‌ಪೋರ್ಟ್ ಸಿಸ್ಟಮ್ ಹ್ಯಾಕ್ ಮಾಡಿದ ಸಾಫ್ಟ್ವೇರ್ ಇಂಜಿನಿಯರ್!
ಪತ್ನಿ ಮೆಚ್ಚಿಸಲು ಹ್ಯಾಕ್ ಮಾಡಿದ ಇಂಜಿನಿಯರ್ : ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದ ಸಾಫ್ಟ್ವೇರ್ ಇಂಜಿನಿಯರ್ವೋರ್ವ ತನ್ನ ಪತ್ನಿಯನ್ನು ಮೆಚ್ಚಿಸಲೆಂದು ಹ್ಯಾಕರ್ ಆಗಿ ಬದಲಾದ ಪ್ರಕರಣ ಕಳೆದ ತಿಂಗಳ (ಮಾರ್ಚ್ 16 ರಂದು) ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶದ ಗಾಜಿಯಾಬಾದ್ನ 27 ವರ್ಷದ ಟೆಕ್ಕಿಯನ್ನು ಮಹಾರಾಷ್ಟ್ರದ ಮುಂಬೈನ ಪೊಲೀಸರು ಬಂಧಿಸಿದ್ದರು. ರಾಜಾಬಾಬು ಷಾ ಎಂಬಾತ ಕಳೆದ ವರ್ಷದ ಸೆಪ್ಟೆಂಬರ್ 24ರ ರಜಾ ದಿನದಂದು ಮುಂಬೈನ ಪೊಲೀಸ್ ಇಲಾಖೆಯ ಪಾಸ್‌ಪೋರ್ಟ್ ಪರಿಶೀಲನಾ ಶಾಖೆಯ ಸಿಸ್ಟಂ ಅನ್ನು ಹ್ಯಾಕ್ ಮಾಡಿದ್ದ.
ಈ ಮೂಲಕ ಪತ್ನಿ ಸೇರಿದಂತೆ ಮೂವರು ಅರ್ಜಿದಾರರ ಮುಂದಿನ ಪರಿಶೀಲನೆ ಈ ಹ್ಯಾಕರ್ ಮಾಡಿ ಮುಗಿಸಿದ್ದ. ಘಟನೆ ನಡೆದ ಎರಡು ದಿನಗಳ ನಂತರ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ : ಭಾರತದಲ್ಲಿ ಪ್ರತಿದಿನ 4 ಲಕ್ಷ ಸೈಬರ್ ಅಟ್ಯಾಕ್: ವರದಿಯಲ್ಲಿ ಬಹಿರಂಗ
ಇನ್ನು ಭಾರತದಲ್ಲಿ ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು 37,697,022 ಸಂಖ್ಯೆಯ ಸೈಬರ್ ದಾಳಿ ನಡೆದಿವೆ. ಅಂದರೆ ದಿನವೊಂದಕ್ಕೆ ದೇಶದಲ್ಲಿ 4,18,000 ಸೈಬರ್ ದಾಳಿಗಳಾಗಿವೆ ಎಂದು ಕಳೆದ ತಿಂಗಳ ಫೆಬ್ರವರಿಯಲ್ಲಿ ವರದಿಯೊಂದು ಹೇಳಿದೆ. ಸೈಬರ್ ಸೆಕ್ಯುರಿಟಿ ಕಂಪನಿ ಫೋರ್ಟಿನೆಟ್ ನೀಡಿದ ಮಾಹಿತಿ ಪ್ರಕಾರ, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಜಾಗತಿಕ ಕಂಪ್ಯೂಟರ್ ವೈರಸ್ ದಾಳಿಗಳ ಪೈಕಿ ಭಾರತದಲ್ಲಿಯೇ ಶೇ 5.81 ದಾಳಿಗಳು ನಡೆದಿವೆ.