ಉದಯಪುರ(ರಾಜಸ್ಥಾನ): ಇತ್ತೀಚೆಗೆ ಉದ್ಘಾಟನೆಗೊಂಡಿರುವ ಅಸರ್ವಾ-ಉದಯಪುರ ಎಕ್ಸ್‌ಪ್ರೆಸ್ ರೈಲು ಹಾದುಹೋಗುವ ಕೆಲವೇ ಗಂಟೆಗಳ ಮೊದಲು ಭಾನುವಾರ ಉದಯಪುರ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿದೆ. ಈ ಸಂಬಂಧ ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ದೃಷ್ಠಿಕೋನದಿಂದಲೂ ಎನ್‌ಐಎ ಸೇರಿದಂತೆ ಇತರೆ ಏಜೆನ್ಸಿಗಳು ತನಿಖೆ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯಪುರದ ಜವಾರ್ ಮೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆವ್ಡಾ ಕಿ ನಾಲ್ ಬಳಿಯ ಓಧಾ ಸೇತುವೆಯಲ್ಲಿ ಸ್ಫೋಟ ಸಂಭವಿಸಿದ್ದು, ಗಣಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಬೆಳಗ್ಗೆ ಸ್ಫೋಟ ಸಂಭವಿಸಿರುವ ಬಗ್ಗೆ ನಮಗೆ ಸ್ಥಳೀಯರು ಮಾಹಿತಿ ನೀಡಿದರು. ನಾವು ಸಹ ರೈಲ್ವೆ ಟ್ರ್ಯಾಕ್‌ನಲ್ಲಿ ಕೆಲವು ಸ್ಫೋಟಕಗಳನ್ನು ಪತ್ತೆ ಮಾಡಿದ್ದೇವೆ. ಇಂತಹ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ" ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ಅನಿಲ್ ಕುಮಾರ್ ವಿಷ್ಣೋಯ್ ಹೇಳಿದ್ದಾರೆ.
ಇದನ್ನೂ ಓದಿ: ಬಹಿರ್ದೆಸೆಗೆ ತೆರಳಿ ಹಳಿ ಮೇಲೆ ಹೆಡ್‌ಫೋನ್ ಹಾಕಿಕೊಂಡು ಕುಳಿತ ಯುವಕ: ರೈಲು ಗುದ್ದಿ ಸಾವು
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ಉದಯಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ನಮ್ಮ ಎಟಿಎಫ್, ಎನ್‌ಐಎ, ಆರ್ಪಿಎಫ್ ತಂಡಗಳನ್ನು ಕಳುಹಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಸೇತುವೆ ಮರು ನಿರ್ಮಾಣ ತಂಡವು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ರೈಲ್ವೆ ಹಳಿ ತಪ್ಪಿಸಲು ಕಿಡಿಗೇಡಿಗಳ ಸಂಚು: ಪೊಲೀಸರಿಂದ ಕಟ್ಟೆಚ್ಚರ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, "ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರಿಗೆ ಆದೇಶಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಗುರುತಿಸಿ ಕೂಡಲೇ ಬಂಧಿಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದರು.