ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಸೋಮವಾರ ಪ್ರಥಮ ಬಾರಿಗೆ ವಿಚಾರಣೆ ನಡೆಸಿದೆ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಹ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ. ಆದರೆ ಕೊರೊನಾದಿಂದ ಬಳಲುತ್ತಿರುವ ಕಾರಣದಿಂದ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಿಲ್ಲ.
ಇಷ್ಟಕ್ಕೂ ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ? ಯಾವಾಗಿಂದ ಶುರುವಾಗಿದ್ದು? ಇದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಹತ್ವದ ಮಾಹಿತಿ.
1. 2012 ರ ಕೇಸ್ ಇದು: ನ್ಯಾಷನಲ್ ಹೆರಾಲ್ಡ್ ಎಂಬುದು ಒಂದು ನಿಯತಕಾಲಿಕೆ. ಈ ನಿಯತಕಾಲಿಕೆಯ ಬಗ್ಗೆ ಪ್ರಕರಣ ಏಕೆ ದಾಖಲಾಯಿತು ಎಂದು ತಿಳಿಯುವ ಮುನ್ನ ಇದು ಆರಂಭವಾಗಿದ್ದು ಯಾವಾಗ ಎಂಬುದನ್ನು ತಿಳಿಯೋಣ. 1937ರಲ್ಲಿ ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಈ ಕಂಪನಿಗೆ 5 ಸಾವಿರ ಜನ ಸ್ವಾತಂತ್ರ್ಯ ಹೋರಾಟಗಾರರು ಶೇರುದಾರರಾಗಿದ್ದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಇದೇ ಸಂಸ್ಥೆಯಿಂದ ಪ್ರಕಾಶನಗೊಳ್ಳುತ್ತಿತ್ತು. ಈ ಪತ್ರಿಕೆಯನ್ನು ಅಕ್ರಮವಾಗಿ ಬೇರೊಂದು ಸಂಸ್ಥೆಗೆ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯದಲ್ಲಿ 2012 ರಲ್ಲಿ ದಾವೆ ದಾಖಲಿಸಿದ್ದರು.
2. ಕ್ವಾಮಿ ಆವಾಜ್, ನವಜೀವನ್ ಪತ್ರಿಕೆಗಳು ಗೊತ್ತೆ?: ನ್ಯಾಷನಲ್ ಹೆರಾಲ್ಡ್ ಮಾತ್ರವಲ್ಲದೆ ಎಜೆಎಲ್ ಸಂಸ್ಥೆಯು ಉರ್ದು ಭಾಷೆಯ ಕ್ವಾಮಿ ಆವಾಜ್ ಹಾಗೂ ಹಿಂದಿ ಭಾಷೆಯ ನವಜೀವನ್ ಎಂಬ ಪತ್ರಿಕೆಗಳನ್ನು 2018ರವರೆಗೂ ಪ್ರಕಟಿಸುತ್ತಿತ್ತು. ಎಜೆಎಲ್ ಕಂಪನಿಗೆ ದೇಶದ ಹಲವಾರು ನಗರಗಳಲ್ಲಿ ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನುಗಳನ್ನು ನೀಡಲಾಗಿತ್ತು. 2010 ರಲ್ಲಿದ್ದಂತೆ ಎಜೆಎಲ್ ಕಂಪನಿಗೆ 1057 ಜನ ಶೇರುದಾರರಿದ್ದರು. ಆದರೆ ನಷ್ಟದ ಕಾರಣದಿಂದ ಕಂಪನಿಯು 2008 ರಲ್ಲಿ ಎಲ್ಲ ಪತ್ರಿಕೆಗಳ ಪ್ರಕಟಣೆಯನ್ನು ನಿಲ್ಲಿಸಿತು.
3. ಏನಿದು ಯಂಗ್ ಇಂಡಿಯಾ ಕಂಪನಿ?: ಎಜೆಎಲ್ ಹೊಂದಿದ್ದ ಸುಮಾರು 90 ಕೋಟಿ ರೂಪಾಯಿಗಳ ಸಾಲವನ್ನು ಯಂಗ್ ಇಂಡಿಯಾ ಎಂಬ ನಕಲಿ ಕಂಪನಿಯ ಮೂಲಕ ಪಾವತಿ ಮಾಡಲಾಗಿದೆ. ಈ ಯಂಗ್ ಇಂಡಿಯಾ ಕಂಪನಿಯನ್ನು 2011ರ ಫೆಬ್ರವರಿ 26ರಂದು 50 ಲಕ್ಷ ರೂಪಾಯಿಗಳ ಮೂಲ ಬಂಡವಾಳದೊಂದಿಗೆ ಆರಂಭಿಸಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಸೇರಿಕೊಂಡು ಯಂಗ್ ಇಂಡಿಯಾ ಕಂಪನಿಯ ಮೂಲಕ ಎಜೆಎಲ್ ಅನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
4. ಯಾರ ಪಾಲು ಎಷ್ಟು?: ಯಂಗ್ ಇಂಡಿಯಾದಲ್ಲಿ ಸೋನಿಯಾ ಹಾಗೂ ರಾಹುಲ್ ತಲಾ 38 ಶೇಕಡಾ ಹಾಗೂ ಇನ್ನುಳಿದ ಶೇಕಡಾ 24 ರಷ್ಟು ಪಾಲನ್ನು ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫರ್ನಾಂಡಿಸ್ ಹೊಂದಿದ್ದರು ಎಂದು ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ.
5. 2,000 ಕೋಟಿ ರೂಪಾಯಿ ಆಸ್ತಿ ಏನಾಯಿತು?: ಸ್ವಾಮಿ ಹೇಳುವ ಪ್ರಕಾರ, ಎಜೆಎಲ್ ಹೊಂದಿದ್ದ 90 ಕೋಟಿ ರೂಪಾಯಿ ಸಾಲವನ್ನು ಕಾಂಗ್ರೆಸ್ ಪಕ್ಷವು ಮನ್ನಾ ಮಾಡಿದ ನಂತರ, ಅದರ ಶೇ 99 ರಷ್ಟು ಪಾಲನ್ನು ಅಂದರೆ ತಲಾ 10 ರೂಪಾಯಿಯ 9 ಕೋಟಿ ಶೇರುಗಳನ್ನು ಯಂಗ್ ಇಂಡಿಯಾ ಕಂಪನಿ ಪಡೆದುಕೊಂಡಿತು. ಆದರೆ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ದಾವೆ ಹೂಡಿದರು. ಎಜೆಎಲ್ ವ್ಯವಹಾರದಲ್ಲಿ ದೆಹಲಿಯ ಬಹಾದುರ್ ಶಾ ಜಫರ್ ಮಾರ್ಗದಲ್ಲಿರುವ 2000 ಕೋಟಿ ರೂಪಾಯಿ ಬೆಲೆ ಬಾಳುವ ಹೆರಾಲ್ಡ್ ಹೌಸ್ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿ ನಿರ್ದೇಶನಾಲಯವು ಈ ಪ್ರಕರಣದ ವಿಚಾರಣೆಯನ್ನು ಆರಂಭಿಸಿದ್ದು, ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತು. ಸುಬ್ರಮಣಿಯನ್ ಸ್ವಾಮಿ ಅವರ ದಾವೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 2014 ರಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತು. ಅದೇ ವರ್ಷದ ಆಗಸ್ಟ್ನಲ್ಲಿ ಇಡಿ ಅಕ್ರಮ ಹಣ ವರ್ಗಾವಣೆಯ ಪ್ರಕರಣವನ್ನೂ ದಾಖಲಿಸಿತು. ಆದರೆ 2015 ರಲ್ಲಿ ಸೋನಿಯಾ ಹಾಗೂ ರಾಹುಲ್ ಇಬ್ಬರಿಗೂ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಖುದ್ದಾಗಿ ವಿಚಾರಣೆಗೆ ಹಾಜರಾಗುವುದರಿಂದ ಎಲ್ಲ ಆರೋಪಿಗಳಿಗೆ 2016 ರಲ್ಲಿ ಸುಪ್ರೀಂಕೋರ್ಟ್ ವಿನಾಯಿತಿ ನೀಡಿತ್ತು. ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೊಡಾ ಹಾಗೂ ಸುಮನ್ ದುಬೆ ಅವರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.