ಲಖನೌ (ಉತ್ತರ ಪ್ರದೇಶ): ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದಿಂದ ಉಚ್ಛಾಟಿತರಾದ ಲಾಲ್ಜಿ ವರ್ಮಾ ಮತ್ತು ರಾಮಚಲ್ ರಾಜಭರ್ ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ)ಕ್ಕೆ ಸೇರಲು ಮುಂದಾಗಿದ್ದಾರೆ.
ನವೆಂಬರ್ 7 ರಂದು ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ನಡೆಯುವ ರ‍್ಯಾಲಿ ವೇಳೆ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಇವರಿಬ್ಬರು ಎಸ್‌ಪಿ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ರಾಜಭರ್ ಅವರು ಅಂಬೇಡ್ಕರ್ ನಗರ ಜಿಲ್ಲೆಯ ಅಕ್ಬರ್‌ಪುರ ಮತ್ತು ವರ್ಮಾ ಅವರು ಕಟೇಹರಿ ಕ್ಷೇತ್ರದ ಶಾಸಕರಾಗಿದ್ದು, ಇವರಿಬ್ಬರೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಬಹಳ ಆಪ್ತರಾಗಿದ್ದರು. ಆದರೆ, ಈ ಬಾರಿ ನಡೆದ ಪಂಚಾಯತ್ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಇವರಿಬ್ಬರನ್ನು ಜೂನ್ 3 ರಂದು ಬಿಎಸ್ಪಿಯಿಂದ ಹೊರಹಾಕಲಾಗಿತ್ತು.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೀಗ ಅಖಿಲೇಶ್ ಯಾದವ್ ಪಕ್ಷ ಬಲಪಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ: ಬಿಎಸ್‌ಪಿ, ಎಸ್‌ಪಿ ಪಕ್ಷದ ನಾಯಕರು ಸೇರಿ 7 ಮಂದಿ ಅರೆಸ್ಟ್
"ನಾನು 25 ವರ್ಷ ಬಿಎಸ್‌ಪಿಯಲ್ಲಿದ್ದೆ ಮತ್ತು ರಾಜ್‌ಭರ್ ಅವರು 35 ವರ್ಷಗಳ ಕಾಲ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ. ನಾವಿಬ್ಬರೂ ಸಮರ್ಪಿತ ಬಿಎಸ್‌ಪಿ ಕಾರ್ಯಕರ್ತರಾಗಿದ್ದೆವು.
ಆದರೂ ಪಕ್ಷದಿಂದ ಹೊರಹಾಕಲ್ಪಟ್ಟಿದ್ದೇವೆ. ನವೆಂಬರ್ 7 ರಂದು ಅಂಬೇಡ್ಕರ್ ನಗರದಲ್ಲಿ ನಡೆಯಲಿರುವ 'ಸತ್ ಪರಿವರ್ತನ್ ಜನಾದೇಶ್' ರ‍್ಯಾಲಿಗೆ ಅಖಿಲೇಶ್ ಯಾದವ್ ಅವರನ್ನು ಆಹ್ವಾನಿಸಿದ್ದೇವೆ. ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ ಎಸ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇವೆ" ಎಂದು ಲಾಲ್ಜಿ ವರ್ಮಾ ತಿಳಿಸಿದ್ದಾರೆ.