ನವದೆಹಲಿ: ಈ ವರ್ಷ ಭಾರತದ ಆರ್ಥಿಕತೆಯು ಶೇಕಡಾ 7.5 ರಷ್ಟು ಬೆಳವಣಿಗೆಯಾಗಲಿದೆ. ಡಿಜಿಟಲ್ ಆರ್ಥಿಕತೆಯ ಮೌಲ್ಯ 2025 ರ ವೇಳೆಗೆ 1 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬ್ರಿಕ್ಸ್ ಬಿಸ್ನೆಸ್ ಫೋರಂನಲ್ಲಿ ವರ್ಚುವಲ್ ಭಾಷಣ ಮಾಡಿದ ಅವರು, ದೇಶದ ರಾಷ್ಟ್ರೀಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ 1.5 ಟ್ರಿಲಿಯನ್ ಡಾಲರ್ ಹಣ ಹೂಡಿಕೆ ಮಾಡಲಾಗುವುದು. ಇದು ಆರ್ಥಿಕ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದರು.
ನಾವು ಈ ವರ್ಷ ಶೇಕಡಾ 7.5 ಬೆಳವಣಿಗೆ ದರ ನಿರೀಕ್ಷಿಸುತ್ತಿದ್ದೇವೆ. ಅದು ನಮ್ಮನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಶಕ್ತಿಯನ್ನು ವೃದ್ಧಿಸುತ್ತದೆ. 'ಹೊಸ ಭಾರತ'ದ ಪರಿಕಲ್ಪನೆಗಾಗಿ ಪ್ರತಿ ವಲಯದಲ್ಲೂ ಪರಿಣಾಮಕಾರಿ ಬದಲಾವಣೆಗಳು ನಡೆಯುತ್ತಿವೆ. ದೇಶದ ಆರ್ಥಿಕತೆಯು ಅದ್ಭುತ ರೀತಿಯಲ್ಲಿ ಚೇತರಿಕೆ ಕಾಣಬೇಕೆಂದರೆ ಅದು ತಂತ್ರಜ್ಞಾನ ಆಧಾರದ ಮೇಲೆಯೇ ಸಾಧ್ಯ ಎಂದು ತಿಳಿಸಿದರು.
ನಾವು ಪ್ರತಿಯೊಂದು ಕ್ಷೇತ್ರದಲ್ಲೂ ನಾವೀನ್ಯತೆಯನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಇದನ್ನು ನಾವು ಯಾವತ್ತಿಗೂ ಬೆಂಬಲಿಸುತ್ತೇವೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್ ಠಾಕ್ರೆ