ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಗಳ ಎಕ್ಸಿಟ್ ಪೋಲ್‌ಗಳು ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂಬ ಭವಿಷ್ಯ ನುಡಿದಿವೆ. ತ್ರಿಪುರಾದಲ್ಲಿ ಬಿಜೆಪಿ ಗೆಲುವಿಗೆ ಸಿದ್ಧವಾಗಿದೆ. ನಾಗಾಲ್ಯಾಂಡ್‌ನಲ್ಲಿ ಎಕ್ಸಿಟ್ ಪೋಲ್‌ಗಳ ಪ್ರಕಾರ, ಕೇಸರಿ ಪಕ್ಷ ಬೆಂಬಲಿತ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆದರೆ, ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿದೆ.
'ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ' ಎಕ್ಸಿಟ್ ಪೋಲ್ ಪ್ರಕಾರ, 60 ಸ್ಥಾನಗಳ ತ್ರಿಪುರಾ ವಿಧಾಸಭೆಯಲ್ಲಿ ಬಿಜೆಪಿ 36ರಿಂದ 45 ಸ್ಥಾನಗಳನ್ನು ಗೆಲ್ಲುತ್ತದೆ. ಜೀ ನ್ಯೂಸ್ ಮ್ಯಾಟ್ರಿಸ್ ಈ ಸಂಖ್ಯೆಯನ್ನು 29 ಮತ್ತು 36 ರ ನಡುವೆ ಇರಿಸುತ್ತದೆ ಮತ್ತು ಟೈಮ್ಸ್ ನೌ 24 ಎಂದು ಹೇಳಿದೆ. ನಾಗಾಲ್ಯಾಂಡ್‌ನಲ್ಲಿ 60 ಸ್ಥಾನಗಳಲ್ಲಿ, BJP-NDPP (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) ಮೈತ್ರಿ 35 ರಿಂದ 43 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಜೀ ನ್ಯೂಸ್- ಮ್ಯಾಟ್ರಿಸ್ ವರದಿ ಮಾಡಿದೆ. ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಈ ಸಂಖ್ಯೆಯು 38 ರಿಂದ 48 ಸ್ಥಾನಗಳ ನಡುವೆ ಇರಬಹುದೆಂದು ಊಹಿಸಿದರೆ, ಟೈಮ್ಸ್ ನೌ ಇದನ್ನು 44 ಎಂದು ಹೇಳುತ್ತದೆ.
ಮೇಘಾಲಯದಲ್ಲಿ, ಜೀ ನ್ಯೂಸ್ ಮ್ಯಾಟ್ರಿಕ್ಸ್ನ ಸಮೀಕ್ಷೆಗಳು ಎನ್‌ಪಿಪಿ 21-26 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಟೈಮ್ಸ್ ನೌ ಈ ಸಂಖ್ಯೆಯನ್ನು 22 ಮತ್ತು ಇಂಡಿಯಾ ಟುಡೆ-ಆಕ್ಸಿಸ್ 18ರಿಂದ 24 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದೆ. ಬಿಜೆಪಿ ಈ ಬಾರಿ 6ರಿಂದ11 ಸ್ಥಾನಗಳನ್ನು ಗೆಲ್ಲಲಿದೆ. 2018ರ ಲೆಕ್ಕಾಚಾರವನ್ನು ಉತ್ತಮಗೊಳಿಸುತ್ತದೆ ಎಂದು ಜೀ ನ್ಯೂಸ್ ಮ್ಯಾಟ್ರಿಕ್ಸ್ ಎಕ್ಸಿಟ್ ಪೋಲ್ ಭವಿಷ್ಯ ತಿಳಿಸಿದೆ. ತೃಣಮೂಲ ಕಾಂಗ್ರೆಸ್ ಕೂಡ 8ರಿಂದ 13 ಸ್ಥಾನಗಳೊಂದಿಗೆ ಖಾತೆ ತೆರೆಯಲಿದೆ.
ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ವಿಧಾನಸಭೆ ಚುನಾವಣೆ ಕ್ರಮವಾಗಿ ಶೇ. 78 ಮತ್ತು ಶೇ. 84 ರಷ್ಟು ಮತದಾನದೊಂದಿಗೆ ಸೋಮವಾರ ಕೊನೆಗೊಂಡಿತು. ತ್ರಿಪುರಾದಲ್ಲಿ ಫೆಬ್ರವರಿ 16 ರಂದು ಶೇ. 90 ಮತದಾನವಾಗಿತ್ತು. ಮೂರೂ ರಾಜ್ಯಗಳ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ. ಸೋಮವಾರ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ 33 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇದನ್ನೂ ಓದಿ: ಮೇಘಾಲಯದಲ್ಲಿ ಶೇ.75, ನಾಗಾಲ್ಯಾಂಡ್‌ನಲ್ಲಿ ಶೇ.82 ಮತದಾನ; ಮಾರ್ಚ್ 2 ರಂದು ಫಲಿತಾಂಶ