ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಭುಗಿಲೆದ್ದಿರುವ ಕೋಮುಗಲಭೆಗಳನ್ನು ವರದಿ ಮಾಡುವಲ್ಲಿ ಸಂಪಾದಕರು ಮತ್ತು ಪತ್ರಕರ್ತರು ಅತ್ಯಂತ ಸಂಯಮ ಮತ್ತು ಉನ್ನತ ವೃತ್ತಿಪರ ಮಾನದಂಡಗಳನ್ನು ಅನುಸರಿಸಬೇಕೆಂದು ಭಾರತೀಯ ಎಡಿಟರ್ಸ್ ಗಿಲ್ಡ್ (ಇಜಿಐ) ತಿಳಿಸಿದೆ.
ಗಲಭೆಯಂತಹ ಸಂದರ್ಭಗಳಲ್ಲಿ ಸ್ಥಳೀಯ ವರದಿಗಾರರು ಎದುರಿಸುವ ಅಪಾಯಗಳ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಗಿಲ್ಡ್, ಸಮುದಾಯಗಳ ನಡುವಿನ ಘರ್ಷಣೆಗಳ ಕುರಿತಂತೆ ವರದಿಗಳ ಮೌಲ್ಯಮಾಪನ ಮತ್ತು ಪ್ರಸ್ತುತಿಯನ್ನು ಗಮನಿಸಿ ಬೇಸರವಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ನಡೆ ನಿರಾಶೆ ಉಂಟುಮಾಡಿದೆ ಎಂದು ಹೇಳಿದೆ.
ಸುದ್ದಿಯನ್ನು ನಾವೇ ಮೊದಲು ನೀಡಬೇಕು ಮತ್ತು ವೀಕ್ಷಕರನ್ನು ಸೆಳೆಯಬೇಕೆಂಬ ಧಾವಂತದಲ್ಲಿ ಅನೇಕ ಸಂಪಾದಕರು ಮತ್ತು ವರದಿಗಾರರು ವಾಸ್ತವವನ್ನು ಸಂಪೂರ್ಣವಾಗಿ ಅರಿಯದೆ ಒಂದು ಮತ್ತು ಮತ್ತೊಂದು ಸಮುದಾಯವನ್ನು ಹೊಣೆ ಮಾಡುವುದು ಶಾಶ್ವತವಾದ ಪರಿಣಾಮಗಳನ್ನು ಬೀರಬಹುದು. ಪ್ರತಿ ಪತ್ರಕರ್ತರು ನ್ಯಾಯಸಮ್ಮತೆ, ತಟಸ್ಥತೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದೆ.