ನವದೆಹಲಿ: ಇದೇ 27 ರಿಂದ ಮಾರ್ಚ್ 10ರ ವರೆಗೆ ಭಾರತ ಮತ್ತು ಜಪಾನ್ ಜಂಟಿ ಸೇನಾ ಸಮರಾಭ್ಯಾಸ 'ಧರ್ಮ ಗಾರ್ಡಿಯನ್ 2022' ರಾಜ್ಯದ ಬೆಳಗಾವಿಯಲ್ಲಿ ನಡೆಯಲಿದೆ. ಜಪಾನಿನ ರಕ್ಷಣಾ ಪಡೆಗಳ ತುಕಡಿಯು ಇಂದು ಸಮರಾಭ್ಯಾಸದ ಸ್ಥಳಕ್ಕೆ ಆಗಮಿಸಿದ್ದು, ಭಾರತೀಯ ಆತ್ಮೀಯ ಸ್ವಾಗತವನ್ನು ನೀಡಿವೆ.
ಇದು ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದ್ದು, 2018 ರಿಂದ ಭಾರತದಲ್ಲಿ ನಡೆಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತವು ವಿವಿಧ ದೇಶಗಳೊಂದಿಗೆ ಕೈಗೊಂಡ ಮಿಲಿಟರಿ ತರಬೇತಿ ಅಭ್ಯಾಸಗಳ ಸರಣಿಯಲ್ಲಿ ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳು ಎದುರಿಸುತ್ತಿರುವ ಭದ್ರತಾ ಸವಾಲುಗಳ ವಿಷಯದಲ್ಲಿ ಜಪಾನ್‌ನೊಂದಿಗೆ 'ಧರ್ಮ ಗಾರ್ಡಿಯನ್ ಸಮರಾಭ್ಯಾಸ ನಿರ್ಣಾಯಕ ಮತ್ತು ಮಹತ್ವದ್ದಾಗಿದೆ.
ಈ ಸೇನಾ ಶಕ್ತಿ ಪ್ರದರ್ಶನದ ವ್ಯಾಪ್ತಿಯು ಕಾಡು ಮತ್ತು ಅರೆ-ನಗರ/ನಗರ ಭೂಪ್ರದೇಶದಲ್ಲಿನ ಕಾರ್ಯಾಚರಣೆಗಳ ಮೇಲೆ ಪ್ಲಟೂನ್-ಮಟ್ಟದ ಜಂಟಿ ತರಬೇತಿಯನ್ನು ಒಳಗೊಂಡಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್‌ಫಾಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ (ಜೆಜಿಎಸ್‌ಡಿಎಫ್) 30ನೇ ದಳದ ಯುದ್ಧ ಅನುಭವಿ ಪಡೆಗಳು ಈ ವರ್ಷ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿವೆ.
ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಕಸರತ್ತು: 12-ದಿನಗಳ ಸುದೀರ್ಘ ಜಂಟಿ ಸಮರಾಭ್ಯಾಸದ ವೇಳಾಪಟ್ಟಿಯಂತೆ ಮನೆಗಳ ಮೇಲೆ ಡ್ರಿಲ್‌ಗಳು, ಅರೆ-ನಗರ ಭೂಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ, ಯುದ್ಧ ಪ್ರಥಮ ಚಿಕಿತ್ಸೆ, ನಿರಾಯುಧ ಯುದ್ಧ ಮತ್ತು ಕ್ಲೋಸ್ ಕ್ವಾರ್ಟರ್ ಯುದ್ಧ ಗುಂಡಿನ ದಾಳಿಯನ್ನು ಒಳಗೊಂಡಿರುತ್ತದೆ.
ಎರಡೂ ಕಡೆಯವರು ಜಂಟಿಯಾಗಿ ತರಬೇತಿ, ಯೋಜನೆ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಸರಣಿಗಳನ್ನು ಕಾರ್ಯಗತಗೊಳಿಸುತ್ತಾರೆ. ಸಂಭವನೀಯ ಬೆದರಿಕೆಗಳನ್ನು ತಟಸ್ಥಗೊಳಿಸಲು ಯುದ್ಧತಂತ್ರದ ಕಸರತ್ತುಗಳು ಈ ವೇಳೆ ನಡೆಯಲಿವೆ.
ಜಂಟಿ ತರಬೇತಿ, ಕಸರತ್ತು, ಯುದ್ಧ ಚರ್ಚೆಗಳು ಹಾಗೂ ಜಂಟಿ ಪ್ರದರ್ಶನಗಳು ಮಾರ್ಚ್ 8 ಮತ್ತು 9 ರಂದು ನಿಗದಿಪಡಿಸಲಾಗಿದೆ. ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಯುದ್ಧತಂತ್ರದ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸಲು ಹಾಗೂ ಸೇನೆಯ ಸಂಬಂಧಗಳನ್ನು ಉತ್ತೇಜಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಸೇನಾ ಪಡೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಚಾಣಕ್ಯ, ತಿರುವಳ್ಳುವರ್ ಸಿದ್ಧಾಂತ!