ನೀಲಗಿರಿ(ತಮಿಳುನಾಡು) : ತಮಿಳುನಾಡಿನ ಕುನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ಕೊನೆಯ ಕ್ಷಣದ ವಿಡಿಯೋವನ್ನು ಸೆರೆ ಹಿಡಿದಿದ್ದ ಕೊಯಂಬತ್ತೂರಿನ ರಾಮನಾಥಪುಂ ಪ್ರದೇಶದ ಜೋ ಎಂಬುವರು ಇದೀಗ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.
ಜೋ ಹೇಳಿಕೊಂಡಿರುವ ಪ್ರಕಾರ, ಸ್ನೇಹಿತ ನಾಸರ್ ಹಾಗೂ ಕುಟುಂಬದೊಂದಿಗೆ ನಾವು ಹೊರಗಡೆ ಪ್ರಯಾಣ ಬೆಳೆಸಿದ್ದೆವು. ಈ ವೇಳೆ, ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹೆಲಿಕಾಪ್ಟರ್ ಹಾರುತ್ತಿರುವುದನ್ನ ನೋಡಿದೆವು. ಆಗ, ನಾನು ಮೊಬೈಲ್ನಲ್ಲಿ ಆ ವಿಡಿಯೋ ಸೆರೆಹಿಡಿಯಲು ಮುಂದಾದೆ. ಆದರೆ, ಕ್ಷಣಾರ್ಧದಲ್ಲೇ ಅದು ಕಣ್ಮರೆಯಾಯಿತು ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಕಣ್ಮರೆಯಾದ ಕ್ಷಣದಲ್ಲೇ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ಈ ವೇಳೆ, ಸ್ಥಳಕ್ಕೆ ಧಾವಿಸಲು ನಾವು ಯತ್ನಿಸಿದಾಗ ಪೊಲೀಸರು ನಮ್ಮನ್ನು ತಡೆದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಬಳಿಕ ನಾವು ನೀಲಗಿರಿ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಹತ್ತಿರದ ಕಾಟೇರಿ ಪೊಲೀಸ್ ಠಾಣೆಗೆ ಹೋದೆವು.
ಆದರೆ, ಅಧಿಕಾರಿಗಳು ಅಲ್ಲಿರಲಿಲ್ಲ. ಅಲ್ಲಿದ್ದ ಕೆಲವರು ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದರು. ಸ್ಥಳಕ್ಕೆ ಧಾವಿಸಿ, ಹೆಲಿಕಾಪ್ಟರ್ ಅಪಘಾತಕ್ಕೂ ಮುನ್ನ ತೆಗೆದ ವಿಡಿಯೋ ತುಣುಕವೊಂದನ್ನ ಇನ್ಸ್ಪೆಕ್ಟರ್ ದೇವರಾಜನ್ ಅವರಿಗೆ ಹಸ್ತಾಂತರ ಮಾಡಿದೆವು ಎಂದಿದ್ದಾರೆ.
ಇದನ್ನೂ ಓದಿರಿ: ಶೀಘ್ರ ಸಿಡಿಎಸ್ ನೇಮಿಸಲಿರುವ ಸರ್ಕಾರ: ಸೇನಾ ಮುಖ್ಯಸ್ಥ ಎಂ.ಎಂ.ನರವಣೆಗೆ ಜವಾಬ್ದಾರಿ?
ಹೆಲಿಕಾಪ್ಟರ್ ದಟ್ಟವಾದ ಮಂಜಿನ ಪ್ರದೇಶದಲ್ಲಿ ಹಾರಾಟ ನಡೆಸಿತ್ತು. ಆದರೆ, ಕೆಲ ಕ್ಷಣಗಳಲ್ಲೇ ದೊಡ್ಡ ಮಟ್ಟದ ಶಬ್ದ ನಮ್ಮ ಕಿವಿಗೆ ಬಿತ್ತು. ಮರದ ಕೊಂಬೆಯ ಮೇಲೆ ಅದು ಬೀಳುತ್ತಿರುವುದನ್ನು ನಾವು ನೋಡಿದೆವು. ಇದರಿಂದ ತುಂಬಾ ಆತಂಕಕ್ಕೊಳಗಾದೆವು ಎಂದು ಈಟಿವಿ ಭಾರತ್ ಜೊತೆ ಕಾಪ್ಟರ್ ಪತನವಾದ ಸಂದರ್ಭದಲ್ಲಿನ ತಮ್ಮ ಆಗಿನ ಸ್ಥಿತಿ ಯಾವ ರೀತಿ ಇತ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಧರ್ಮಪತ್ನಿ ಸೇರಿದಂತೆ 13 ಯೋಧರು ಹುತಾತ್ಮರಾಗಿದ್ದಾರೆ.