ಪಾಟ್ನಾ (ಬಿಹಾರ): ಬಿಹಾರದ ಜೆಡಿಯು ಸರ್ಕಾರ "ನಿಷ್ಪ್ರಯೋಜಕ" ಎಂದು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಆರ್ಜೆಡಿಯ 25 ನೇ ಸಂಸ್ಥಾಪನಾ ದಿನದ ಮುನ್ನಾದಿನ 'ಈಟಿವಿ ಭಾರತ' ನಡೆಸಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಿತೀಶ್ ಕುಮಾರ್ ಹಿಂಬಾಗಿಲ ರಾಜಕಾರಣ ಮಾಡಿ ಸರ್ಕಾರ ರಚಿಸಿದರು ಎಂದು ಆರೋಪಿಸಿದ್ದಾರೆ.
‘ಕುರ್ಚಿ ಭದ್ರ ಪಡಿಸಿಕೊಳ್ಳಲು ಕೆಲಸ’
ಸಿಎಂ ನಿತೀಶ್ ಕುಮಾರ್ಗೆ ಬಿಹಾರದ ಜನರ ಬಗ್ಗೆ ಕಾಳಜಿಯಿಲ್ಲ. ಅವರು ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರ ನಿವೃತ್ತಿಗೆ ನಾನು ಶುಭಾಶಯ ತಿಳಿಸುತ್ತೇನೆ. ಬಿಹಾರ ಯುವ ರಾಜ್ಯ ಅನ್ನೋದನ್ನು ಅವರು ಮರೆಯಬಾರದು ಎಂದರು.
‘ಹದಗೆಟ್ಟಿರುವ ವ್ಯವಸ್ಥೆ’
ಪೆಟ್ರೋಲ್ ದರ ಲೀಟರ್ಗೆ 100 ರೂ. ದಾಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಕೊಲೆ, ದರೋಡೆ, ಅತ್ಯಾಚಾರಗಳು ನಡೆಯುತ್ತಿವೆ. ಆದರೂ ನಿತೀಶ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.
‘ಭ್ರಷ್ಟಾಚಾರದ ಪಿತಾಮಹ ನಿತೀಶ್’
ನಿತೀಶ್ ಕುಮಾರ್ ಸಂಘಟಿತ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಅವರು ರಕ್ಷಿಸುತ್ತಿದ್ದಾರೆ. ಅವರ ಆಳ್ವಿಕೆಯಲ್ಲಿ 70 ಹಗರಣಗಳು ನಡೆದಿದ್ದರೂ, ಈವರೆಗೆ ಒಂದೇ ಒಂದು ತನಿಖೆ ನಡೆದಿಲ್ಲ.
‘ಕೋವಿಡ್ ನಿಭಾಯಿಸುವಲ್ಲಿ ವಿಫಲ’
ಕೋವಿಡ್ ಪರಿಸ್ಥಿತಿ ನಿಭಾಯಿಸಲು ಜೆಡಿಯು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕಿನಿಂದ ಮೃತಪಟ್ಟವರನ್ನು ಹೂಳಲು ಜಾಗವಿಲ್ಲದೆ, ಗಂಗಾ ನದಿಗೆ ಎಸೆಯಲಾಗಿದೆ. ಇಂಥ ಕೆಟ್ಟ ಆಡಳಿತ ಹಿಂದೆಂದೂ ನೋಡಿಲ್ಲ ಎಂದು ಕಿಡಿಕಾರಿದರು.
‘ಬಿಜೆಪಿ ಮಣಿಸಲು ಕಾಂಗ್ರೆಸ್ಗೆ ಮಾತ್ರ ಸಾಧ್ಯ’
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಮಾಜವಾಗಿ ಪಕ್ಷ ಮಾತ್ರ ಅಲ್ಲಿ ಬಿಜೆಪಿಯನ್ನು ಸೋಲಿಸಬಹುದು. 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯತಂತ್ರವನ್ನು ಮೊದಲೇ ನಿರ್ಧರಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಸವಾಲು ಹಾಕಬಲ್ಲದು. ಆದರೂ, ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಚರ್ಚೆ ನಡೆಸಬೇಕಿದೆ ಎಂದರು.
‘ಲಂಚವಿಲ್ಲದೆ ಯಾವ ಕೆಲಸವನ್ನೂ ಮಾಡಲ್ಲ’
ನಿತೀಶ್ ಕುಮಾರ್ ಲಂಚವಿಲ್ಲದೆ ಯಾವ ಕೆಲಸವನ್ನೂ ಮಾಡಲ್ಲ. ನನ್ನ ತಂದೆ ಲಾಲು ಪ್ರಸಾದ್ ಯಾದವ್ ಆಳ್ವಿಕೆಯಲ್ಲಿ ಸಾಮಾನ್ಯ ವ್ಯಕ್ತಿಯೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಹೋಗಿ ಮಾತನಾಡಬಹುದಿತ್ತು. ಆದರೆ, ಈಗ ಕಾಲ ಬದಲಾಗಿದೆ ಎಂದಿದ್ದಾರೆ.
‘ಅಂಬೇಡ್ಕರ್ ನಂಬುವ ಜನ ನಾವು’
ಚಿರಾಗ್ ಪಾಸ್ವಾನ್ ಬಗ್ಗೆ ನಮಗೆ ಸಂಪೂರ್ಣ ಸಹಾನುಭೂತಿಯಿದೆ. ನಾವು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ನಂಬುವ ಜನ. ಚಿರಾಗ್, ಸಂವಿಧಾನ ನಾಶಪಡಿಸುವ ಜನರೊಂದಿಗೆ ಇರಬೇಕೋ, ಬೇಡ್ವೋ ಎಂಬುದನ್ನು ನಿರ್ಧರಿಸಬೇಕಿದೆ ಎಂದರು.
ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 74 ಸ್ಥಾನಗಳನ್ನು ಗಳಿಸಿದ್ದರೆ, ಜೆಡಿಯು 43 ಸ್ಥಾನಗಳಿಗೆ ಸೀಮಿತವಾಗಿತ್ತು. ಆದಾಗ್ಯೂ, ಹಿಂದೂಸ್ತಾನಿ ಅವಾಮಿ ಮೋರ್ಚಾ ಮತ್ತು ವಿಕಾಸ ಸೀಲ ಇನ್ಸಾನ್ ಪಕ್ಷ ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆಯಾಯಿತು.