ಮಧುರೈ (ತಮಿಳುನಾಡು): ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕರ್ನಾಟಕದ ಹಾಸನದಲ್ಲಿ ನಿನ್ನೆ ಬಂಧಿತರಾಗಿದ್ದ ಎಐಎಡಿಎಂಕೆ ಮಾಜಿ ಸಚಿವ ರಾಜೇಂದ್ರ ಬಾಲಾಜಿಯನ್ನು ವಿರುಧನಗರ ಜಿಲ್ಲಾ ನ್ಯಾಯಾಲಯವು ಗುರುವಾರ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಜ್ಯ ಹೈನುಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ ಆವಿನ್‌ನಿಂದ 3 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. 20 ದಿನಗಳಿಂದ ತಲೆಮರೆಸಿಕೊಂಡಿದ್ದ ಬಾಲಾಜಿ ಅವರನ್ನು ತಮಿಳುನಾಡು ಪೊಲೀಸರು ಬುಧವಾರ ಮಧ್ಯಾಹ್ನ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಬಂಧಿಸಿದ್ದರು. ನಂತರ ಮಧ್ಯರಾತ್ರಿ ವಿರುಧನಗರ ಜಿಲ್ಲಾ ಅಪರಾಧ ವಿಭಾಗಕ್ಕೆ ಕರೆತಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಉಪ ಪೊಲೀಸ್ ಮಹಾನಿರೀಕ್ಷಕ (ಮಧುರೈ ರೇಂಜ್) ಕಾಮಿನಿ ಮತ್ತು ವಿರುಧನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನೋಹರ್ ಆರೋಪಿಯನ್ನು ಜಿಲ್ಲೆಗೆ ಕರೆತಂದ ನಂತರ ವಿಚಾರಣೆ ನಡೆಸಿದರು. ನಂತರ ಆರೋಪಿಗೆ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದು ಜಿಲ್ಲಾ ನ್ಯಾಯಾಧೀಶ ಪರಮವೀರ್ ಅವರ ಮುಂದೆ ಹಾಜರುಪಡಿಸಿದರು.
ಆರೋಪಿ ಬಾಲಾಜಿಯ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.