ಡೆಹ್ರಾಡೂನ್(ಉತ್ತರಾಖಂಡ): ಭೂಕಂಪನದಿಂದ ಬಿರುಕು ಬಿಟ್ಟಿರುವ ಜೋಶಿಮಠದಲ್ಲಿನ ಹೆಚ್ಚಿನ ಮನೆಗಳು, ಕಟ್ಟಡಗಳು ಮತ್ತು ರಸ್ತೆಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿವೆ. ಅಸುರಕ್ಷಿತ ಕಟ್ಟಡಗಳ ಮೇಲೆ ರೆಡ್ ಕ್ರಾಸ್ಗಳನ್ನು ಹಾಕಲಾಗಿದ್ದು, ಜನರು ಅಪಾಯವನ್ನು ಎದುರುನೋಡುತ್ತಾ ಆತಂಕದಿಂದ ಬದುಕು ಸಾಗಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿರುವ ಪ್ರತಿ ನಿಮಿಷವೂ ಮುಖ್ಯವಾಗುತ್ತಿದೆ ಎಂದು ಉತ್ತರಾಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ಸೋಮವಾರ ಹೇಳಿದ್ದಾರೆ.
ಜೋಶಿಮಠದ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇಲ್ಲಿನ ನಿವಾಸಿಗಳು ಸುರಕ್ಷತೆಗೆ ಗಮನಹರಿಸಿ, ಅವರನ್ನು ಸ್ಥಳಾಂತರಿಸುವ ಕಾರ್ಯವನ್ನು ಇನ್ನೂ ವೇಗಗೊಳಿಸಿ ಎಂದು ಸೂಚನೆ ನೀಡಿದರು. ಈಗಾಗಲೇ 27 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುಳುಗಡೆಪೀಡಿತ ಮನೆಗಳ ಸಂಖ್ಯೆ 678ಕ್ಕೇರಿದೆ. ಇದುವರೆಗೆ 82 ಕುಟುಂಬಗಳನ್ನು ಪಟ್ಟಣದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಚಮೋಲಿಯಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬುಲೆಟಿನ್ ಮಾಹಿತಿ ಕೊಟ್ಟಿದೆ.
ಅಪಾಯದಂಚಿನಲ್ಲಿರುವ 200ಕ್ಕೂ ಹೆಚ್ಚು ಮನೆಗಳಿಗೆ ಜಿಲ್ಲಾಡಳಿತವು, ಇವು ವಾಸಿಸಲು ಅಸುರಕ್ಷಿತ ಮನೆಗಳು ಎಂದು ಸೂಚಿಸುವ ರೆಡ್ ಕ್ರಾಸ್ (ಮಾರ್ಕ್)ಗಳನ್ನು ಹಾಕಿದೆ. ಅಂತಹ ಮನೆಗಳ ನಿವಾಸಿಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಅಥವಾ ಬಾಡಿಗೆ ಮನೆಗಳಿಗೆ ತೆರಳುವಂತೆ ಮನವಿ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಳ್ಳುವ ಪ್ರತಿ ಕುಟುಂಬಗಳಿಗೆ ರಾಜ್ಯ ಸರ್ಕಾರ ಮುಂದಿನ 6 ತಿಂಗಳವರೆಗೆ ಬಾಡಿಗೆ ಕಟ್ಟಲು 4,000 ರೂಪಾಯಿ ನೆರವು ನೀಡುತ್ತದೆ ಎಂದು ಹೇಳಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡ ಸನ್ನದ್ಧವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೋಶಿಮಠದಲ್ಲಿ 16 ಕಡೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಹೊರತುಪಡಿಸಿ ಜೋಶಿಮಠದಲ್ಲಿ ಸಂತ್ರಸ್ತರಿಗಾಗಿ 19 ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಶಾಲಾ ಕಟ್ಟಡಗಳನ್ನು ಮತ್ತು ಪಟ್ಟಣದ ಹೊರಗೆ ಪಿಪ್ಪಲಕೋಟಿಯಲ್ಲಿ 20 ಸ್ಥಳಗಳನ್ನು ಗುರುತಿಸಲಾಗಿದೆ.
ಕುಸಿತಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಅಪಾಯವಾಗುವುದನ್ನು ತಡೆಯುವ ಕೆಲಸವನ್ನು ತಕ್ಷಣ ಪ್ರಾರಂಭಿಸಬೇಕು. ದೊಡ್ಡ ಬಿರುಕುಗಳಾಗಿರುವ ಹಾಗೂ ಶಿಥಿಲವಾಗಿರುವ ಮನೆಗಳನ್ನು ಶೀಘ್ರದಲ್ಲೇ ನೆಲಸಮಗೊಳಿಸುವ ಮೂಲಕ ಹೆಚ್ಚಿನ ಅಪಾಯವಾಗದಂತೆ ತಡೆಯಬೇಕು. ಒಡೆದು ಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಲೈನ್‌ಗಳು ಮುಳುಗಡೆ ವಲಯದಲ್ಲಿ ಅಪಾಯವನ್ನು ಇನ್ನೂ ಸಂಕೀರ್ಣಗೊಳಿಸುವ ಸಾಧ್ಯತೆ ಇರುವುದರಿಂದ ತಕ್ಷಣ ದುರಸ್ತಿ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಸಂಧು ತಿಳಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಆರೋಪವೇನು?: ಎನ್‌ಟಿಪಿಸಿ ಸುರಂಗ ನಿರ್ಮಾಣ ಹಾಗೂ ಚಾರ್ ಧಾಮ್ ಸರ್ವಋತು ರಸ್ತೆ ನಿರ್ಮಾಣವೇ ಪಟ್ಟಣದಲ್ಲಿ ಭೂ ಕುಸಿತ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಎಂದು ಸ್ಥಳೀಯರು ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಆದರೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿ, ತನ್ನ ತಪೋವನ ವಿಷ್ಣುಘಡ ಹೈಡಲ್ ಯೋಜನೆಯ ಸುರಂಗಕ್ಕೂ ಜೋಶಿಮಠದ ಭೂಕುಸಿತಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಅದು ಪಟ್ಟಣದ ಅಡಿಯಲ್ಲಿ ಹಾದುಹೋಗುವುದಿಲ್ಲ. ಈ ಸುರಂಗವನ್ನು ಬೋರಿಂಗ್ ಯಂತ್ರದ ಮೂಲಕ ನಿರ್ಮಿಸಲಾಗಿದೆ ಮತ್ತು ಪ್ರಸ್ತುತ ಗುಡ್ಡಗಾಡು ರಾಜ್ಯದ ಧೌಲಿಗಂಗಾ ನದಿಯಲ್ಲಿ ನಡೆಯುತ್ತಿರುವ ಯೋಜನೆಗೆ ಕಂಪನಿಯು ಯಾವುದೇ ಬ್ಲಾಸ್ಟಿಂಗ್ ಕೆಲಸವನ್ನು ಕೈಗೊಳ್ಳುತ್ತಿಲ್ಲ ಎಂದು ಪ್ರತಿಕ್ರಿಯಿಸಿದೆ.
ಸಮಸ್ಯೆಯ ವಿವರವಾದ ವಿಶ್ಲೇಷಣೆಯಿಂದ ಮಾತ್ರ ಅದರ ಕಾರಣಗಳನ್ನು ಕಂಡುಹಿಡಿಯಬಹುದೆಂದು ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ನಿರ್ದೇಶಕ ಕಲಾಚಂದ್ ಸೇನ್ ತಿಳಿಸಿದ್ದಾರೆ. ಉತ್ತರಾಖಂಡದ ಜೋಶಿಮಠದಲ್ಲಿ ಭೂ ಕುಸಿತದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ತಜ್ಞರು ಮತ್ತು ಪರಿಸರವಾದಿಗಳು ವರದಿಯನ್ನು ಸಲ್ಲಿಸುವವರೆಗೆ ಪ್ರದೇಶದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ. ಹಳೆಯ ಜೋಶಿಮಠ ಪಟ್ಟಣವನ್ನು ಸಂರಕ್ಷಿಸಿ ಹೊಸ ಪಟ್ಟಣವನ್ನು ಅಭಿವೃದ್ಧಿಪಡಿಸಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಕೋರಿದೆ. ಈ ಕುರಿತು ಮೋದಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದಿಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಮನೆಗಳೊಂದಿಗೆ ಭಾವನಾತ್ಮಕ ಸಂಬಂಧ: ಪೀಡಿತ ಪ್ರದೇಶದ ಅನೇಕ ಕುಟುಂಬಗಳು ತಮ್ಮ ಮನೆಗಳೊಂದಿಗಿನ ಭಾವನಾತ್ಮಕ ಸಂಬಂಧಗಳನ್ನು ಕಡಿದುಕೊಂಡು ಪರಿಹಾರ ಕೇಂದ್ರಗಳಿಗೆ ಹೋಗಲು ಕಷ್ಟ ಪಡುತ್ತಿದ್ದಾರೆ. ಮನೆಯ ಸೆಳೆತವನ್ನು ಮೀರಲು ಸಾಧ್ಯವಾಗದೆ, ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಗೊಂಡವರೂ ಸಹ ಅಪಾಯದ ವಲಯದಲ್ಲಿರುವ ತಮ್ಮ ಮನೆಗಳಿಗೆ ಮತ್ತೆ ಮರಳುತ್ತಿದ್ದಾರೆ. ತಮ್ಮ ಉಳಿತಾಯವನ್ನೆಲ್ಲ ತಮ್ಮ ಕನಸಿನ ಮನೆಗಳಿಗೆ ಖರ್ಚು ಮಾಡಿರುವ ಅದೆಷ್ಟೋ ಜನ ಈಗ ಅವುಗಳನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುತ್ತಿದ್ದಾರೆ.
ಉತ್ತರಾಖಂಡದ ಜೋಶಿಮಠದಲ್ಲಿ ಭೂ ಕುಸಿತದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ತಜ್ಞರು ಮತ್ತು ಪರಿಸರವಾದಿಗಳ ವರದಿಯನ್ನು ಸಲ್ಲಿಸುವವರೆಗೆ ಪ್ರದೇಶದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ.
ಇದನ್ನೂ ಓದಿ: ಜೋಶಿಮಠದಲ್ಲಿ ಭೂಕುಸಿತ: ಅಪಾಯದ ಅಂಚಿನ ಮನೆಗಳ ಮೇಲೆ ರೆಡ್ ಕ್ರಾಸ್ ಮಾರ್ಕ್