ಪುಣೆ (ಮಹಾರಾಷ್ಟ್ರ): ಶುಕ್ರವಾರ ಸಂಜೆ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ತನ್ನ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, 24 ವರ್ಷದ ಶುಭಂ ಕುಮಾರ್ ಮೊದಲ ರ‍್ಯಾಂಕ್ ಪಡೆದಿದ್ದಾರೆ.
ಬಿಹಾರದ ಕತಿಹಾರ ಮೂಲದ ಶುಭಂ ಕುಮಾರ್ ತನ್ನ ಮೂರನೇ ಪ್ರಯತ್ನದಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಐಐಟಿ ಬಾಂಬೆಯಿಂದ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದ ಶುಭಂ, ಪ್ರಸ್ತುತ ಪುಣೆಯ ನ್ಯಾಷನಲ್ ಅಕಾಡೆಮಿ ಆಫ್ ಡಿಫೆನ್ಸ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ (NADFM)ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟ: ಶುಭಂ ಕುಮಾರ್ಗೆ 1st ರ‍್ಯಾಂಕ್
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶುಭಂ ಕುಮಾರ್, ಫಲಿತಾಂಶದ ಬಗ್ಗೆ ತುಂಬಾ ಖುಷಿ ಆಗ್ತಾ ಇದೆ. ನಮ್ಮ ಕುಟುಂಬದ ಎಲ್ಲರೂ ಬಹಳ ಸಂತೋಷದಲ್ಲಿದ್ದಾರೆ. ನನ್ನ ತಂದೆ ಬ್ಯಾಂಕ್ ಮ್ಯಾನೇಜರ್. ಬಾಲ್ಯದಿಂದಲೇ ಐಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಈಗ ಅದು ಈಡೇರಿದೆ. ನನಗೆ ಯಾವ ಹುದ್ದೆ ನೀಡಿದರೂ ಮಾಡುವೆ. ಅದರಲ್ಲಿಯೂ ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡಲು ಅವಕಾಶ ಸಿಕ್ಕರೆ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.