ಚಂಡೀಗಢ (ಪಂಜಾಬ್): ಖಾಯಂ ನೇಮಕಾತಿಗೆ ಆಗ್ರಹಿಸಿ ಎಲೆಮೆಂಟರಿ ಟೀಚರ್ ಟ್ರೈನಿಂಗ್ (ಇಟಿಟಿ) ಕೋರ್ಸ್ ಮಾಡಿರುವ ಶಿಕ್ಷಕರು ಮೊಬೈಲ್ ಟವರ್ ಹತ್ತಿ ಕುಳಿತಿರುವ ಘಟನೆ ಪಂಜಾಬ್ನ ಚಂಡೀಗಢದಲ್ಲಿ ನಡೆದಿದೆ.
ಇಂದು ಬೆಳಗ್ಗೆಯಿಂದಲೇ ಟವರ್ ಏರಿ ಕುಳಿತಿರುವ ಶಿಕ್ಷಕರನ್ನು ಮನವೊಲಿಸಿ ಕೆಳಗಿಳಿಸಲು ಚಂಡೀಗಢ ಪೊಲೀಸರು, ಸಿವಿಲ್ ಡಿಫೆನ್ಸ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಅದರಲ್ಲಿಯೂ ಒಬ್ಬರು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆವೊಡ್ಡುತ್ತಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಹೆಚ್ಚುತ್ತಿವೆ ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣಗಳು
2016ರಲ್ಲಿ ಇಟಿಟಿ ಕೋರ್ಸ್ ಪಾಸ್ ಮಾಡಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜ್ಯದ ಅನೇಕ ಶಿಕ್ಷಕರನ್ನು ಏಕಾಏಕಿ ಸೇವೆಯಿಂದ ತೆಗೆದುಹಾಕಲು 2018ರಲ್ಲಿ ನೋಟಿಸ್ ನೀಡಲಾಗಿತ್ತು. ಇದರ ವಿರುದ್ಧ ಶಿಕ್ಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಶಿಕ್ಷಕರ ಸಮಸ್ಯೆಗಳನ್ನು ಆಲಿಸುವಂತೆ ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು. ಅನೇಕ ಧರಣಿಗಳನ್ನು ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಂದು ಮೊಬೈಲ್ ಟವರ್ ಹತ್ತಿ ಕುಳಿತಿದ್ದಾರೆ. ಖಾಯಂ ನೇಮಕಾತಿ ಮಾಡಲು ಒಪ್ಪಿಗೆ ನೀಡುವ ವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.