ನವದೆಹಲಿ: ವಿಶ್ವ ಪರಿಸರ ದಿನದ ಪ್ರಯುಕ್ತ ವರ್ಚುಯಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಇಂದು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಎಥೆನಾಲ್ ಕ್ಷೇತ್ರದ ಅಭಿವೃದ್ಧಿಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಎಥೆನಾಲ್ ಉತ್ಪಾದನೆ ಮತ್ತು ವಿತರಣೆಗೆ ಸಂಬಂಧಿಸಿದ ಇ -100 ಪೈಲಟ್ ಯೋಜನೆಯನ್ನು ಪುಣೆಯಲ್ಲಿಯೂ ಪ್ರಾರಂಭಿಸಲಾಗಿದೆ. ಇದು 21 ನೇ ಶತಮಾನದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದರು.
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ 5 ನೆ ಸ್ಥಾನದಲ್ಲಿದೆ. ಕಳೆದ ಆರು ವರ್ಷಗಳಲ್ಲಿ ಸೌರಶಕ್ತಿಯ ಸಾಮರ್ಥ್ಯವನ್ನು ಸುಮಾರು 15 ಪಟ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.
7-8 ವರ್ಷಗಳ ಹಿಂದೆ, ದೇಶದಲ್ಲಿ ಎಥೆನಾಲ್ ಉತ್ಪಾದನೆ ಅಷ್ಟಾಗಿರಲಿಲ್ಲ. ಆದರೆ, ಈಗಿನ ಎಥೆನಾಲ್ ಉತ್ಪಾದನೆಯು ರೈತರ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ. ನಾವು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿ ಹೊಂದಿದ್ದೇವೆ.
ಪರಿಸರ ರಕ್ಷಣೆ ವಿಚಾರದಲ್ಲಿ ವಿಶ್ವದಲ್ಲೇ ಭಾರತ ಅಗ್ರಗಣ್ಯ. ಆರ್ಥಿಕತೆ ಮತ್ತು ಪರಿಸರ ವಿಜ್ಞಾನ ಒಟ್ಟೊಟ್ಟಿಗೆ ಸಾಗುತ್ತಿವೆ. ದೇಶದ ರೈಲ್ವೆ ಜಾಲದ ಹೆಚ್ಚಿನ ಭಾಗವನ್ನು ವಿದ್ಯುದ್ದೀಕರಿಸಲಾಗಿದ್ದು, ವಿಮಾನ ನಿಲ್ದಾಣಗಳನ್ನು ಸಹ ಸೌರಶಕ್ತಿ ಆಧಾರಿತವಾಗಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
2014 ಕ್ಕಿಂತ ಮೊದಲು, ಕೇವಲ ಏಳು ವಿಮಾನ ನಿಲ್ದಾಣಗಳಲ್ಲಿ ಮಾತ್ರ ಸೌರಶಕ್ತಿ ಸೌಲಭ್ಯವಿತ್ತು. ಆದರೆ, ಇಂದು ಈ ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ. ಭಾರತವು ಒಂದು ದೊಡ್ಡ ಜಾಗತಿಕ ದೃಷ್ಟಿಯೊಂದಿಗೆ ಮುಂದುವರಿಯುತ್ತಿದೆ ಎಂದರು.
ಇದನ್ನೂ ಓದಿ:ಇಂದು ವಿಶ್ವ ಪರಿಸರ ದಿನಾಚರಣೆ: ಮರಳಿನಲ್ಲಿ ಅರಳಿದ ಪರಿಸರ ಕಾಳಜಿ
ವಿಶ್ವ ಪರಿಸರ ದಿನಾಚರಣೆಯ ನೆನಪಿಗಾಗಿ, ಭಾರತ ಸರ್ಕಾರ (ಜಿಒಐ) 2023 ರ ಏಪ್ರಿಲ್ 1 ರಿಂದ ಎಥೆನಾಲ್-ಸಂಯೋಜಿತ ಪೆಟ್ರೋಲ್ ಅನ್ನು ಶೇಕಡಾ 20 ರಷ್ಟು ಎಥೆನಾಲ್ನೊಂದಿಗೆ ಮಾರಾಟ ಮಾಡಲು ತೈಲ ಕಂಪನಿಗಳಿಗೆ ನಿರ್ದೇಶನ ನೀಡುವ ಇ -20 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.