ನವದೆಹಲಿ: ಬಿಕ್ಕಟ್ಟಿನಿಂದ ಚೇತರಿಕೆಗೆ ಪರಿವರ್ತನೆಗೊಳ್ಳುವಲ್ಲಿಯ ಪ್ರಮುಖ ಸವಾಲು ಎಂದರೆ ಎಲ್ಲರಿಗೂ ಸಮಾನವಾಗಿ ಲಸಿಕೆಗಳನ್ನು ನೀಡುವುದು. ಹೀಗೆಂದು ವಾಷಿಂಗ್ಟನ್ ಡಿಸಿಯಲ್ಲಿ ಜಿ-20 ಸಭೆಯ ಭಾಗವಾಗಿ ನಡೆಯುತ್ತಿರುವ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಈ ಸಭೆಯು ಜಿ-20 ಇಟಾಲಿಯನ್ ಪ್ರೆಸಿಡೆನ್ಸಿ ಅಡಿ ನಡೆದ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯಾಗಿದೆ. ಇದರಲ್ಲಿ ಜಾಗತಿಕ ಆರ್ಥಿಕ ಚೇತರಿಕೆ, ದುರ್ಬಲ ದೇಶಗಳಿಗೆ ಬೆಂಬಲ, ಜಾಗತಿಕ ಆರೋಗ್ಯ, ಹವಾಮಾನ ಕ್ರಮ, ಅಂತಾರಾಷ್ಟ್ರೀಯ ತೆರಿಗೆ ಮತ್ತು ಹಣಕಾಸು ವಲಯದ ಕುರಿತು ವಿವಿಧ ವಿಷಯಗಳ ಕುರಿತು ಚರ್ಚೆಗಳು ಮತ್ತು ಒಪ್ಪಂದಗಳು ನಡೆದಿವೆ.
ಸಾಂಕ್ರಾಮಿಕದಿಂದ ನಿರಂತರ ಚೇತರಿಕೆಗಾಗಿ, ಜಿ -20ಯಲ್ಲಿ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಹಣಕಾಸಿನ ಸ್ಥಿರತೆ ಮತ್ತು ದೀರ್ಘಾವಧಿ ಹಣಕಾಸಿನ ಸುಸ್ಥಿರತೆ ಕಾಪಾಡಿಕೊಳ್ಳುವ ಬಗ್ಗೆ ಸಮಾಲೋಚನೆ ಮಾಡುತ್ತಿದ್ದು, ಪರಿಹಾರ ಕಂಡುಕೊಳ್ಳಲು ಶ್ರಮಪಡುತ್ತಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಸಲಹೆ ಏನು?
ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಲಸಿಕೆಯ ಪ್ರಯೋಜನ ಹಾಗೂ ಆರ್ಥಿಕ ಚೇತರಿಕೆಗೆ ವಿಶ್ವದ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಹವಾಮಾನ ಬದಲಾವಣೆಯ ಕುರಿತು ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ ಮತ್ತು ಪ್ಯಾರಿಸ್ ಒಪ್ಪಂದದ ತತ್ವಗಳನ್ನು ಸರಿಯಾಗಿ ಜಾರಿಗೊಳಿಸಬೇಕು ಎಂದು ವಿತ್ತ ಸಚಿವೆ ಆಗ್ರಹಿಸಿದ್ದಾರೆ.
G-20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಜಾಗತಿಕ ಆರ್ಥಿಕತೆಯನ್ನು ಬಲವಾದ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯತ್ತ ಮುನ್ನಡೆಸಲು G-20 ಕ್ರಿಯಾ ಯೋಜನೆಯಲ್ಲಿ ಕಾರ್ಯಸೂಚಿಯನ್ನು ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸುವುದರೊಂದಿಗೆ ಜಿ-20 ಸಭೆ ಮುಕ್ತಾಯಗೊಂಡಿತು.