ಪ್ರತೀಕಾರ.. ಮಾನವ ತನಗಾದ ಅನ್ಯಾಯಕ್ಕೆ, ಅನ್ಯಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿ, ಅವರಿಗೂ ತೊಂದರೆ ನೀಡುವ ಗುಣ. ಈ ಗುಣ ಮಾನವನಿಗೆ ಮಾತ್ರ ಸೀಮಿತವಾ?.. ಮೇಲ್ನೋಟಕ್ಕೆ 'ಹೌದು' ಎಂದು ಅನ್ನಿಸಿದರೂ ಕೂಡಾ ಹಲವಾರು ಪ್ರಕರಣ ಮಾನವನ ಆದಿಯಾಗಿ ಎಲ್ಲಾ ಪ್ರಾಣಿಗಳಲ್ಲೂ ಸೇಡು ಅಥವಾ ಪ್ರತೀಕಾರದ ಗುಣಗಳಿವೆ ಎಂಬುದನ್ನು ಸಾಬೀತುಪಡಿಸಿವೆ.
ಮಾನವನ ಮೂಲವಾದ ಮಂಗಗಳಲ್ಲೂ ಕೂಡ ಈ ಪ್ರತೀಕಾರದ ಗುಣ ಇದೆ ಎಂಬುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಆದರೆ, ಇಲ್ಲೊಂದು 'ಪ್ರತೀಕಾರ' ಭೀಕರ ರೂಪವನ್ನು ತಾಳಿದೆ. ಮಂಗಗಳ ಈ ಪ್ರತೀಕಾರದ ಸ್ವರೂಪ ಶ್ವಾನಕುಲವನ್ನೂ ಸೇರಿದಂತೆ ಮನುಷ್ಯರನ್ನೂ ಬೆಚ್ಚಿಬೀಳಿಸಿದೆ.
ಮಂಗಗಳು ಪ್ರತೀಕಾರ ತೀರಿಸಿಕೊಳ್ಳುತ್ತಿವೆ. ಈ ಪ್ರತೀಕಾರದ ಭಾಗವಾಗಿ ಸುಮಾರು 300ಕ್ಕೂ ಹೆಚ್ಚು ಶ್ವಾನಗಳ 'ಕೊಲೆ'ಯಾಗಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್ ಎಂಬಲ್ಲಿ ಈ ಘಟನೆ ನಡೆದಿದೆ.
'ಕೊಲೆಗಳು' ವಿಚಿತ್ರ ಮತ್ತು ಭೀಕರ : ಮಂಗಗಳು ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಿವೆ ಎಂಬ ವಿಚಾರ ಕೇಳಿದರೆ ನೀವೂ ಕೂಡ ದಂಗಾಗುತ್ತೀರಿ. ಕಳೆದೊಂದು ವಾರದಿಂದ ಮಂಗಗಳು ನಾಯಿಗಳ ಮರಿಗಳನ್ನು ಮರಗಳ ಮೇಲಕ್ಕೋ ಅಥವಾ ಕಟ್ಟಡಗಳ ಮೇಲಕ್ಕೋ ಎತ್ತೊಯ್ದು, ಅಲ್ಲಿಂದ ಬೀಳಿಸಿ, ಕೊಲ್ಲುತ್ತಿವೆ. ಹೀಗೆ ಕೊಲೆಯಾದ ನಾಯಿಗಳ ಮರಿಗಳ ಸಂಖ್ಯೆ 300 ದಾಟಿದೆ ಎಂದು ಅಂದಾಜಿಸಲಾಗಿದೆ.
ಎರಡು ವಾರಗಳ ಹಿಂದೆ ಮಂಗವೊಂದು ಸೀತಾರಾಮ್ ನೈಬಲ್ ಎಂಬುವರ ಮನೆಯಲ್ಲಿದ್ದ ನಾಯಿಮರಿಯೊಂದನ್ನು ಹೊತ್ತೊಯ್ದಿತ್ತು. ನಾಯಿ ಮರಿಯ ಚೀರಾಟ ಕೇಳಿದ ಸೀತಾರಾಮ್ ನೈಬಲ್ ನಾಯಿ ಮರಿಯನ್ನು ರಕ್ಷಿಸಲು ತೆರಳಿ, ಅವಘಡವಾಗಿ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಗಳಿಂದ ಪ್ರತೀಕಾರವೇಕೆ?: ಕೆಲವು ದಿನಗಳ ಹಿಂದೆ ಮಂಗನ ಮರಿಯೊಂದನ್ನು ನಾಯಿಗಳು ಕೊಂದಿದ್ದವು. ಒಂದು ಮಂಗನ ಮರಿಯನ್ನು ಕೊಂದ ಕಾರಣಕ್ಕೆ ಈಗ ಮಂಗಗಳೆಲ್ಲಾ ಶ್ವಾನ ಸಾಮ್ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳುತ್ತಿವೆ. ಸುಮಾರು 300 ನಾಯಿಮರಿಗಳನ್ನು ಕೊಂದರೂ ಅವುಗಳ ಸೇಡು ತಣ್ಣಗಾಗಿಲ್ಲ ಎಂಬುದು ಸ್ಥಳೀಯರ ಮಾತು.
ಚಿಕ್ಕಮಕ್ಕಳನ್ನೂ ಟಾರ್ಗೆಟ್ ಮಾಡಿದ ಮಂಗಗಳು : ಮಂಗಗಳು ನಾಯಿಗಳನ್ನು ಕೊಲ್ಲುತ್ತಿರುವ ಕಾರಣದಿಂದ ಆ ಊರಿನಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗಿವೆ. ಈ ವೇಳೆ ಶಾಲೆಗಳಿಗೆ ತೆರಳುವ ಚಿಕ್ಕಮಕ್ಕಳ ಮೇಲೆಯೂ ದಾಳಿ ಮಾಡಲು ಮಂಗಗಳು ಮುಂದಾಗಿವೆ ಎಂದು ಸ್ಥಳೀಯರು ಹೇಳುವ ಮಾತು. ಕೋತಿಗಳ ಕ್ವಾಟ್ಲೆಯಿಂದ ದಿಗ್ಬ್ರಾಂತರಾದ ಜನರು ಕೂಡಲೇ ಮಂಗಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಕ್ಕೆ ಬಂದಿದ್ದ ಸಿಬ್ಬಂದಿ ಕನಿಷ್ಠ ಒಂದೇ ಒಂದೂ ಮಂಗವನ್ನು ಹಿಡಿಯಲಾಗದೇ ಬರಿಗೈಲಿ ವಾಪಸ್ ತೆರೆಳಿದ್ದಾರೆ.
ಕರ್ನಾಟಕದಲ್ಲಿಯೂ ನಡೆದಿತ್ತು ಪ್ರತೀಕಾರ ಪ್ರಕರಣ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಕೋತಿಯೊಂದು ಆತನನ್ನು ಹುಡುಕಿ, ಕಚ್ಚಿ ಗಾಯಗೊಳಿಸಿ, ಪ್ರತೀಕಾರ ತೀರಿಸಿಕೊಂಡಿತ್ತು. ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿಯೇ ಸುಮಾರು 22 ಕಿಲೋಮೀಟರ್ ಪ್ರಯಾಣ ಬೆಳೆಸಿತ್ತು ಆ ಮಂಗ.
ಈ ಪ್ರತೀಕಾರದ ಪ್ರಕರಣಗಳನ್ನು ಗಮನಿಸಿದರೆ, ಒಮ್ಮೊಮ್ಮೆ ಮನುಷ್ಯರೇ ಎಷ್ಟೋ ವಾಸಿ ಎಂದು ಅನ್ನಿಸದೇ ಇರೋದಿಲ್ಲ. ಮನುಷ್ಯರ ದ್ವೇಷ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಹಾವಿನ ದ್ವೇಷ 12 ವರ್ಷ ಎಂಬ ಮಾತಿದೆ. ಈ ಮಂಗಗಳ ಸೇಡು ಯಾವಾಗ ಮುಗಿಯುತ್ತದೆಯೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಸೇಡು ತೀರಿಸಿಕೊಂಡ ಕೋತಿ.. ಮೂಡಿಗೆರೆಯಲ್ಲಿ ರೇಗಿಸಿದ ವ್ಯಕ್ತಿಯ ಕೈಯನ್ನೇ ಕಚ್ಚಿದ ಮಂಗ..