ಮಾಲ್ಡಾ (ಪಶ್ಚಿಮ ಬಂಗಾಳ): ಇಂಜಿನಿಯರಿಂಗ್ ಕ್ಷೇತ್ರ ತುಂಬಾ ಅಗಾಧವಾದುದು ಮತ್ತು ಕೌಶಲ್ಯಾಧಾರಿತವಾಗಿದೆ. ಹೀಗಾಗಿ ಇದಕ್ಕೆ ತುಸು ಹೆಚ್ಚೇ ಬೇಡಿಕೆ ಇದೆ. ಹೀಗಾಗಿಯೇ ಕೋಟ್ಯಂತರ ರೂಪಾಯಿ ಗಳಿಸುವ ಇಂಜಿನಿಯರ್ ಯುವಕನನ್ನು ವರಿಸಬೇಕು ಎಂದು ಯುವತಿಯರು ಕೂಡಾ ಕನಸು ಕಾಣುತ್ತಿರುತ್ತಾರೆ. ಆದರೆ, ಇಲ್ಲಿಬ್ಬರು ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಇವರು ಓದಿದ್ದು ಇಂಜಿನಿಯರಿಂಗ್ ಆದ್ರೂ ನಡೆಸ್ತಿರೋದು ಸಣ್ಣ ಚಹಾದಂಗಡಿ!. ಮಾಡಲು ಕೆಲಸವಿಲ್ಲದೇ ನಿರುದ್ಯೋಗವನ್ನು ಮೆಟ್ಟಿ ನಿಲ್ಲಲು ಈ ದಾರಿ ಆಯ್ದುಕೊಂಡಿದ್ದಾರೆ.
ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾಚಕ್‌ನ ನಿವಾಸಿಗಳಾದ ಅಲಂಗೀರ್ ಖಾನ್ ಮತ್ತು ರಾಹುಲ್ ಅಲಿ ಅವರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಮನಸ್ಸಿನಲ್ಲಿ ಕುಡಿಯೊಡೆದಿದ್ದೇ ಬಿ.ಟೆಕ್ ಚಾಯ್ವಾಲಾ ಅಂಗಡಿ. ಅಲಂಗೀರ್ ಖಾನ್ ಬಿ.ಟೆಕ್ ಓದಿದ್ದರೆ, ರಾಹುಲ್ ಅಲಿ ಕಂಪ್ಯೂಟರ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ. ಓದಿಗೆ ತಕ್ಕಂತೆ ಕೆಲಸ, ಸಂಬಳ ಸಿಗದ ಕಾರಣ ಅವರು ಚಹಾದ ಗೂಡಂಗಡಿ ಆರಂಭಿಸಿದ್ದಾರೆ. ಇದಕ್ಕೆ ತಮ್ಮ ಓದಿನ 'ಬಿ.ಟೆಕ್' ಹೆಸರನ್ನೇ ಇಟ್ಟಿದ್ದಾರೆ.
ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಚಹಾದಂಗಡಿ ಆರಂಭವಿಸುವ ಯೋಚನೆ ಮಾಡಿದ್ದೇ ರೋಚಕವಾಗಿದೆ. ನಿರುದ್ಯೋಗ, ಸ್ವಾಭಿಮಾನದ ಜೀವನ ಒಂದೆಡೆಯಾದರೆ, ಮಧ್ಯಪ್ರದೇಶ ಮೂಲದ ಎಂಜಿನಿಯರ್ ಆರಂಭಿಸಿದ್ದ 'ಎಂಬಿಎ ಚಾಯ್ವಾಲಾ'ದ ಯಶಸ್ಸು ಇವರನ್ನು ಪ್ರೇರೇಪಿಸಿದೆ. ಇಷ್ಟುದ್ದ ಓದಿದ ಕೋರ್ಸ್ಗೆ ನಾಲ್ಕಾಸಿನ ಸಂಬಳಕ್ಕಾಗಿ ದುಡಿಯುವ ಬದಲಿಗೆ ತಾವೇ ಉದ್ಯಮ ಆರಂಭಿಸಲು ಯೋಚಿಸಿ ಚಾಯ್ವಾಲಿಗಳಾಗಿದ್ದಾರೆ.
ಮಾಲ್ಡಾದಲ್ಲಿ ಸಣ್ಣ ಜಾಗವೊಂದನ್ನು ಹುಡುಕಿ ಹೊಸ ವರ್ಷದ ಮೊದಲ ದಿನವೇ ಚಾಯ್ವಾಲಾಗಳಾಗಿ ಕಾರ್ಯಾರಂಭಿಸಿದ್ದಾರೆ. ಇದಕ್ಕೆ ಸ್ನೇಹಿತರ ನೆರವನ್ನೂ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಈ ಸಣ್ಣ ಉದ್ಯಮವನ್ನು ದೊಡ್ಡದಾಗಿ ಬೆಳೆಸುವ ಇರಾದೆಯಲ್ಲಿದ್ದಾರೆ.
ಬಿ.ಟೆಕ್ ಚಾಯ್ಅಂಗಡಿ ಹಿಂದಿನ ಕಥೆ ಏನು?: 'ಜಿಕೆಸಿಐಇಟಿಯಿಂದ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್ ಮಾಡಿದೆ. ನಂತರ ಕೋಲ್ಕತ್ತಾದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಅಧ್ಯಯನ ಮಾಡಿದೆ. ಇದು ತುಂಬಾ ದೀರ್ಘವಾದ ಓದಾಗಿತ್ತು. ಕೊನೆಗೂ ಹೇಗೋ ಓದು ಮುಗಿಸಿ ಕಾಲೇಜಿನಿಂದ ಪ್ರಮಾಣಪತ್ರ ಪಡೆದುಕೊಂಡೆ. ಬಳಿಕ ಹಲವಾರು ಉದ್ಯೋಗಾವಕಾಶಗಳು ಬಂದವು. ಆದರೆ ಅವೆಲ್ಲವೂ ತಿಂಗಳಿಗೆ 12 ರಿಂದ 20 ಸಾವಿರ ರೂಪಾಯಿಯ ಸಂಬಳ ಮಾತ್ರ.'
'ಈ ಅಲ್ಪಸ್ವಲ್ಪ ಸಂಬಳಕ್ಕಾಗಿ ನಾನು ರಾಜ್ಕೋಟ್ಗೆ ಹೋಗಿ ದುಡಿಯಬೇಕಿತ್ತು. ಈ ಸಂಪಾದನೆಯಲ್ಲಿ ಜೀವನ ನಡೆಸುವುದೇ ಕಷ್ಟ ಎಂದರಿತೆ. ನನ್ನಂತೆಯೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಅಲಿಯ ಜೊತೆ ಚರ್ಚಿಸಿ ನಾವಿಬ್ಬರೂ ಸೇರಿ ಟೀ ಅಂಗಡಿ ನಡೆಸಲು ನಿರ್ಧರಿಸಿದೆವು. ದೇಶಾದ್ಯಂತ ಸದ್ದು ಮಾಡಿರುವ ಎಂಬಿಎ ಚಾಯ್ವಾಲಾ ಪ್ರಫುಲ್ ಬಿಲ್ಲೋರ್ ನಮಗೆ ಪ್ರೇರಣೆಯಾದ. ಆತನಂತೆ ನಾವೂ ಟೀ ಉದ್ಯಮದಲ್ಲಿ ಹೊಸ ವಿಕ್ರಮ ಸಾಧಿಸಲು ಮುಂದಡಿ ಇಟ್ಟಿದ್ದೇವೆ' ಎಂದು ಅಲಂಗೀರ್ ಖಾನ್ ಈಟಿಬಿ ಭಾರತ್ಗೆ ತಿಳಿಸಿದರು.
ಶೇಕಡಾ 47 ರಷ್ಟು ಮಂದಿ ನಿರುದ್ಯೋಗಿಗಳು: 'ರಾಜ್ಯದಲ್ಲಿ ಯಾವುದೇ ಸರ್ಕಾರಿ ಕಾರ್ಖಾನೆಗಳಿಲ್ಲ. ಕಾರ್ಖಾನೆಗಳೆಲ್ಲವೂ ಖಾಸಗಿ ಒಡೆತನದಲ್ಲಿವೆ. ಅವುಗಳೀಗ ಸೀಮಿತ ಉದ್ಯೋಗಿಗಳನ್ನು ಹೊಂದಿವೆ. ಕಂಪನಿಗಳ ನಿಲುವೂ ಬದಲಾಗಿದ್ದು ಒಬ್ಬರಿಗೆ ದೊಡ್ಡ ಮೊತ್ತದ ಸಂಬಳ ನೀಡುವ ಬದಲಾಗಿ ಅದರಲ್ಲಿ ಮೂವರಿಗೆ 30 ಸಾವಿರ ರೂ ನೀಡಿ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಾರೆ. ದೇಶಾದ್ಯಂತ ಸುಮಾರು 47 ಪ್ರತಿಶತ ಇಂಜಿನಿಯರ್‌ಗಳು ನಿರುದ್ಯೋಗಿಗಳಾಗಿದ್ದಾರೆ' ಎಂದು ಖಾನ್ ಹೇಳಿದರು.
'ಮಾಲ್ಡಾದಲ್ಲಿ ಬಾಡಿಗೆಗೆ ಜಾಗ ಪಡೆದು ಚಹಾದಂಗಡಿ ಆರಂಭಿಸಿದ್ದೇವೆ. ಹೊಸ ವರ್ಷದಿಂದ ಕಾರ್ಯಾರಂಭ ಮಾಡಿದ್ದೇವೆ. ಇದೇ ಕ್ಷೇತ್ರದಲ್ಲಿ ಬೆಳೆಯುವ ಯೋಜನೆ ಹೊಂದಿದ್ದೇವೆ. ಎಂಬಿಎ ಚಾಯ್ವಾಲಾನಂತೆ ಬಿ.ಟೆಕ್ ಚಾಯ್ ಅಂಗಡಿಯನ್ನು ಬೆಳೆಸಲಿದ್ದೇವೆ. ಇಬ್ಬರೂ ಸೇರಿ ಇದನ್ನು ಮುಂದೆ ವಿಸ್ತರಿಸುತ್ತೇವೆ. ಸದ್ಯಕ್ಕೆ ಒಂದೇ ರೀತಿಯ ಚಹಾ ಮಾತ್ರ ಲಭ್ಯವಿದೆ. ಬಳಿಕ 15 ರಿಂದ 17 ವಿಭಿನ್ನ ಟೀ ತಯಾರಿಸಿ ಮಾರಾಟ ಮಾಡುವ ಯೋಜನೆ ಹೊಂದಿದ್ದೇವೆ. ಟೀ ದರ 5 ರಿಂದ 20 ರೂಪಾಯಿಗೆ ಸಿಗಲಿದೆ' ಎಂದು ರಾಹುಲ್ ಅಲಿ ತಿಳಿಸಿದರು.
ಇದನ್ನೂ ಓದಿ: ಆನ್ಲೈನ್ನಲ್ಲಿ ಆಧಾರ್ ವಿಳಾಸ ತಿದ್ದುಪಡಿಗೆ ಹೊಸ ವಿಧಾನ: ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಸಾಕು