ಹೈದರಾಬಾದ್: ಫ್ರೆಂಡ್ಶಿಪ್ ಡೇ(Friendship Day) ದಿನದಂದು ಸ್ನೇಹಿತರ ಭೇಟಿ ಮಾಡಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೈದರಾಬಾದ್ನ ಗಚ್ಚಿಬೌಲಿಯಲ್ಲಿ ಈ ದುರ್ಘಟನೆ ನಡೆದಿದ್ದು, ಅಶ್ರಿತಾ ಸಾವನ್ನಪ್ಪಿರುವ ವಿದ್ಯಾರ್ಥಿನಿಯಾಗಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬ್ಯುಸಿನೆಸ್ ಸ್ಕೂಲ್ನ ವಿದ್ಯಾರ್ಥಿ ಅಭಿಷೇಕ್ ಹಾಗೂ ಆತನ ಸ್ನೇಹಿತರಾದ ಸತ್ಯಪ್ರಕಾಶ್, ತರುಣಿ ಹಾಗೂ ಅಶ್ರಿತಾ ಎಲ್ಲರೂ ಸ್ನೇಹಿತರಾಗಿದ್ದು, ಫ್ರೆಂಡ್ಶಿಪ್ ಡೇ ದಿನ ಭೇಟಿಯಾಗುವ ಯೋಜನೆ ಹಾಕಿಕೊಂಡಿದ್ದಾರೆ.
ಸತ್ಯಪ್ರಕಾಶ್ ಹಾಗೂ ತರುಣಿ ಈಗಾಗಲೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದು, ಅಶ್ರಿತಾ ಕೆನಡಾದಲ್ಲಿ MTech ಮಾಡ್ತಿದ್ದಾರೆ. ಇವರೆಲ್ಲರೂ ಶಾಲಾ ದಿನಗಳಲ್ಲೇ ಸ್ನೇಹಿತರಾಗಿದ್ದ ಕಾರಣ, ಒಬ್ಬರನ್ನೊಬ್ಬರು ಭೇಟಿ ಮಾಡುವ ಯೋಜನೆ ಹಾಕಿಕೊಂಡಿದ್ದರು.
ಇದನ್ನೂ ಓದಿರಿ: ಸ್ನೇಹಿತನ ರಕ್ಷಣೆಗೆ ಹೋಗಿ ಪ್ರಾಣ ಕಳೆದುಕೊಂಡ ಮೂವರು...'ಫ್ರೆಂಡ್ಶಿಪ್ ಡೇ'ಯಂದೇ ನಡೆದ ದುರ್ಘಟನೆ!
ತೆಲ್ಲಾಪುರದಿಂದ ಹೊರಟಿರುವ ಎಲ್ಲರೂ ಕೊಂಡಪುರ ಪಬ್ನಲ್ಲಿ ಪಾರ್ಟಿ ಮಾಡಿದ್ದು, ಈ ವೇಳೆ ಮದ್ಯ ಸೇವನೆ ಮಾಡಿದ್ದಾರೆ. ಇದಾದ ಬಳಿಕ ಅಭಿಷೇಕ್ ಕಾರು ಡ್ರೈವ್ ಮಾಡಿದ್ದಾನೆ. ರಾತ್ರಿ ಸುಮಾರು 11:30ರ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್ಗೆ ಜೋರಾಗಿ ಹೊಡೆದಿದ್ದಾನೆ. ಹೀಗಾಗಿ ಕಾರು ಮೂರ್ನಾಲ್ಕು ಸಲ ಪಲ್ಟಿ ಹೊಡೆದಿದೆ.
ಘಟನೆಯಿಂದ ಅಭಿಷೇಕ್ ಹಾಗೂ ಸತ್ಯಪ್ರಕಾಶ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಶ್ರಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗಚ್ಚಿಬೌಲಿ ಪೊಲೀಸರು ಅಭಿಷೇಕ್ನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸ್ನೇಹಿತರ ದಿನವೇ ಮೋಜು-ಮಸ್ತಿಗಾಗಿ ತೆರಳಿದ್ದ ಆರು ಸ್ನೇಹಿತರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನಂದಿಪೇಟೆ ಪ್ರದೇಶದಲ್ಲಿ ನಡೆದಿದೆ.