ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಚಂದಗಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತನಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಎರಡರಿಂದ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ ಎನ್ನಲಾಗಿತ್ತು. ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡ ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದರು. ಬಳಿಕ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
24 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನಡೆದ ಎರಡನೇ ಎನ್‌ಕೌಂಟರ್ ಇದಾಗಿದೆ. 2022ರ ಮೊದಲ ಐದು ದಿನಗಳಲ್ಲಿ ಐದನೆಯದು. ಈ ಎಲ್ಲ ಎನ್‌ಕೌಂಟರ್‌ಗಳಲ್ಲಿ ಇಂದು ಹತರಾದ 3 ಜನ ಉಗ್ರರು ಸೇರಿದಂತೆ ಎಂಟು ಮಂದಿ ಉಗ್ರರನ್ನು ಕೊಲ್ಲಲಾಗಿದೆ.
5 ಎನ್‌ಕೌಂಟರ್‌ಗಳಲ್ಲಿ, ಶ್ರೀನಗರ ಕಳೆದ ಸೋಮವಾರ ಕೇವಲ ಒಂದು ಗಂಟೆಯ ಅವಧಿಯಲ್ಲಿ 2 ಎನ್‌ಕೌಂಟರ್‌ಗಳಿಗೆ ಸಾಕ್ಷಿಯಾಗಿದೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಒಂದು ಎನ್‌ಕೌಂಟರ್ ಮತ್ತು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳು ತಲಾ ಒಂದು ಎನ್‌ಕೌಂಟರ್ ನಡೆದಿದೆ.
ಮಂಗಳವಾರ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಜಿಲ್ಲೆಯ ಓಕೆ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಸ್ಥಳೀಯ ಎಲ್‌ಇಟಿ ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತುಂಡು ಭೂಮಿಗಾಗಿ ಗಲಾಟೆ: ಮಹಿಳಾ ಸಾಫ್ಟ್ವೇರ್ ಉದ್ಯೋಗಿ ಬರ್ಬರ ಹತ್ಯೆ!