ಬಾರಾಮುಲ್ಲಾ( ಜಮ್ಮು ಮತ್ತು ಕಾಶ್ಮೀರ): ಭಾರತೀಯ ಸೇನೆ, ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಾರಾಮುಲ್ಲಾದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಬಳ ನುಸುಳಲು ಯತ್ನಿಸಿದ ಮೂವರನ್ನು ಹೊಡೆದುರುಳಿಸಲಾಗಿದೆ.
ಈ ಮೂಲಕ ಒಳನುಸುಳುವಿಕೆಯನ್ನು ಯಶಸ್ವಿಯಾಗಿ ತಡೆಯಲಾಯಿತು. ಮೂವರು ಒಮ್ಮೆಲೆ ಗಡಿ ದಾಟಲು ಮುಂದಾಗಿದ್ದರು. ಈ ವೇಳೆ ಸೇನೆ ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾದರು, ಆ ಬಳಿಕ ಒಬ್ಬ ಪರಾರಿ ಆಗಲು ಯತ್ನಿಸಿದ್ದ ಆತನನ್ನೂ ಬಳಿಕ ಸೇನೆ ಎನ್ಕೌಂಟರ್ ಮಾಡಿ ಹಾಕಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಭಾರತೀಯ ಸೇನೆ ಹೇಳಿದೆ
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಹತ್ಲಂಗಾ ಫಾರ್ವರ್ಡ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಎನ್ಕೌಂಟರ್ ಮುಂದುವರೆದಿದೆ. ಮೂವರು ಉಗ್ರನನ್ನು ಸೇನಾಪಡೆಗಳು ಹೊಡೆದುರುಳಿಸಿವೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಎಕ್ಸ್(ಹಿಂದಿನ ಟ್ವಿಟರ್) ನಲ್ಲಿ ಕಾಶ್ಮೀರ ವಲಯ ಪೊಲೀಸರು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, "ಬಾರಾಮುಲ್ಲಾ ಜಿಲ್ಲೆಯ ಉರಿ, ಹತ್ಲಂಗಾದ ಫಾರ್ವರ್ಡ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭಾರತೀಯ ಸೇನೆ ನಡುವೆ ಎನ್ಕೌಂಟರ್ ಪ್ರಾರಂಭವಾಗಿದೆ. ಹೆಚ್ಚಿನ ವಿವರಗಳನ್ನು ಬಳಿಕ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದರು. ಆ ಬಳಿಕ ಸೇನಾ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ಅನಂತ್ನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದ ಗಡೋಲ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ತೀವ್ರ ಭಯೋತ್ಪಾದನೆ ವಿರೋಧಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಭದ್ರತಾ ಪಡೆ, ಗಡೋಲ್ ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಸುತ್ತುವರಿದಿದ್ದಾರೆ.
ಡ್ರೋನ್ಗಳ ಮೂಲಕ ಉಗ್ರರ ಮೇಲೆ ನಿಗಾ ಇರಿಸಿರುವ ಸೇನಾ ಪಡೆ, ಭಯೋತ್ಪಾದಕರು ಸಂಚರಿಸುತ್ತಿರುವುದು ಕಂಡ ಬಂದರೆ ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡುವುದರ ಜೊತೆಗೆ, ಮೋರ್ಟಾರ್ ಶೆಲ್ಗಳನ್ನು ಹಾರಿಸುತ್ತಿದ್ದಾರೆ. ಕಾಡಿನೊಳಗೆ 2-3 ಜನ ಭಯೋತ್ಪಾದಕರು ಅಡಗಿ ಕುಳಿತಿರುವ ಮಾಹಿತಿ ಇದ್ದು, ಅವರನ್ನು ಕೊಲ್ಲಲಾಗುವುದು. ಯಾವುದೇ ಕಾರಣಕ್ಕೂ ಒಬ್ಬ ಭಯೋತ್ಪಾದಕನೂ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಭದ್ರತಾ ಪಡೆಗಳು ಗುಡ್ಡದ ಸುತ್ತ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಬೆಟ್ಟದ ಹಿಂಭಾಗದಲ್ಲಿ ಚರಂಡಿ, ನದಿಗಳಿವೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉಗ್ರರು ತಪ್ಪಿಸಿಕೊಳ್ಳುವುದು ಕಷ್ಟ. ಏತನ್ಮಧ್ಯೆ ಗುರುವಾರ ನಾಪತ್ತೆಯಾಗಿದ್ದ ಭಾರತೀಯ ಯೋಧನೊಬ್ಬ ಎನ್ಕೌಂಟರ್ನಲ್ಲಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಮೂವರು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಒಬ್ಬ ಮೇಜರ್, ಒಬ್ಬ ಕರ್ನಲ್ ಹಾಗೂ ಡಿಎಸ್ಪಿ ಪ್ರಾಣ ಕಳೆದುಕೊಂಡಿದ್ದರು. ಯೋಧರ ಸಾವಿಗೆ ದೇಶಕ್ಕೆ ದೇಶವೇ ಕಂಬನಿ ಮಿಡಿದಿತ್ತು. ಮೂವರು ಯೋಧರ ಪಾರ್ಥಿವ ಶರೀರಗಳಿಗೆ ಗೌರವ ವಂದನೆ ಸಲ್ಲಿಸಿ ಅವರವರ ತವರುಗಳಿಗೆ ಸೇನೆ ರವಾನಿಸಿತ್ತು. ಈ ಬಗ್ಗೆ ದೇಶಾದ್ಯಂತ ಆಕ್ರೋಶವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: ಅನಂತ್‌ನಾಗ್‌ನಲ್ಲಿ 3ನೇ ದಿನವೂ ಮುಂದುವರಿದ ಎನ್ಕೌಂಟರ್: ಯೋಧ ನಾಪತ್ತೆ, ಇಬ್ಬರಿಗೆ ಗಾಯ