ಅನಂತನಾಗ್(ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯ ಫೋಸ್ ಕರೇರಿ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ, ಶೋಧ ಆರಂಭಿಸಿದ್ದಾಗ ಉಗ್ರರು ಗುಂಡಿನ ದಾಳಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ಗುಂಡಿನ ದಾಳಿ ನಡೆಸಿ, ಇಬ್ಬರು ಉಗ್ರರನ್ನು ಹತ್ಯೆ ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹತರಾದ ಭಯೋತ್ಪಾದಕರನ್ನು ಡ್ಯಾನಿಶ್ ಭಟ್ ಅಕಾ ಕೊಕಬ್ ದುರೀ ಮತ್ತು ಬಶರತ್ ನಬಿ ಎಂದು ಗುರುತಿಸಲಾಗಿದೆ. ಇಬ್ಬರೂ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ನಂಟು ಹೊಂದಿದ್ದರು. ಅಲ್ಲದೇ, 2021ರ ಏಪ್ರಿಲ್ 9ರಂದು ನಡೆದ ಯೋಧ ಸಲೀಂ ಹಾಗೂ ಅದೇ ವರ್ಷದ ಮೇ 29ರಂದು ಜಬ್ಲಿಪೋರಾದಲ್ಲಿ ನಡೆದ ಇಬ್ಬರು ನಾಗರಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಕಾಶ್ಮೀರ ಎಡಿಜಿಪಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಲಿಸುವ ರೈಲಿಂದ ಬೀಳುತ್ತಿದ್ದ ಪ್ರಯಾಣಿಕನ ರಕ್ಷಿಸಿದ ಪೊಲೀಸ್: ವಿಡಿಯೋ