ಮೋತಿಹಾರಿ (ಬಿಹಾರ): ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಘೋರಸಾಹನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೇಪಾಳ ಗಡಿಯ ಸಮೀಪ ಪೊಲೀಸರು ಮತ್ತು ದರೋಡೆಕೋರರ ನಡುವೆ ಭಾನುವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ದರೋಡೆಕೋರರು ಸಾವನ್ನಪ್ಪಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸದ್ಯ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಪೊಲೀಸರು ಜಮಾಯಿಸಿದ್ದು, ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಚಕಮಕಿ ನಡೆದ ಸ್ಥಳದಿಂದ ನಾವು ಸಜೀವ ಬಾಂಬ್‌ಗಳು, ಪಿಸ್ತೂಲ್, ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಕಟ್ಟರ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಮೋತಿಹಾರಿ ಎಸ್‌ಪಿ ಕಾಂತೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಸುಮಾರು 25-30 ದರೋಡೆಕೋರರು ಘೋರಸಾಹನ್‌ನಲ್ಲಿರುವ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ದರೋಡೆಕೋರರು ಬಾಂಬ್ ದಾಳಿ ನಡೆಸಿದ್ದಾರೆ. ಪೊಲೀಸ್ ತಂಡದ ಮೇಲೆ ದರೋಡೆಕೋರರು ಗುಂಡು ಹಾರಿಸಿ ಬಾಂಬ್‌ಗಳನ್ನು ಎಸೆದಿದ್ದರಿಂದ ಮೂವರು ಪೊಲೀಸರು ಗಾಯಗೊಂಡ ನಂತರ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಆಗ ದರೋಡೆಕೋರರು ಸುಮಾರು ಒಂದು ಡಜನ್ ಬಾಂಬ್‌ಗಳನ್ನು ಪೊಲೀಸ್ ಸಿಬ್ಬಂದಿ ಮೇಲೆ ಎಸೆದಿದ್ದಾರೆ. ಪೊಲೀಸರು ದರೋಡೆಕೋರರ 12 ರಿಂದ 14 ಸುತ್ತುಗಳ ದಾಳಿಗೆ ಪ್ರತಿಯಾಗಿ 12 ಸುತ್ತು ಗುಂಡು ಹಾರಿಸಿದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಪೊಲೀಸರು ಗುಂಡಿನ ದಾಳಿ ನಡೆಸಿದರೂ ಕತ್ತಲೆಯಾಗಿದ್ದ ಕಾರಣ, ಅದರ ಲಾಭವನ್ನು ಪಡೆದು ದರೋಡೆಕೋರರು ನೇಪಾಳದ ಮೂಲಕ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘೋರಸಹನ್ ಭಾರತ-ನೇಪಾಳ ಗಡಿಯ ಸಮೀಪದಲ್ಲಿದೆ. ದಾಳಿ ನಡೆದ ಸ್ಥಳದ ಕೆಲವು ಪ್ರದೇಶಗಳಲ್ಲಿ ಸಜೀವ ಬಾಂಬ್‌ಗಳು ಕೂಡ ಪತ್ತೆಯಾಗಿವೆ. ನೇಪಾಳದ ಗಡಿಯವರೆಗೂ ರಕ್ತದ ಕಲೆಗಳು ಗೋಚರಿಸುತ್ತಿದ್ದು, ಇದರಿಂದಾಗಿ ಕೆಲವು ದುಷ್ಕರ್ಮಿಗಳು ಗಾಯಗೊಂಡಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಹೆಚ್ಚಿನ ದರೋಡೆಕೋರರು ಗಡಿಯಾಚೆಯಿಂದ ಬಂದವರು ಎಂದು ತಿಳಿಸಿದರು.
"ಘಟನೆ ನಡೆದ ಸ್ಥಳದಲ್ಲಿ ಬಾಂಬ್‌ಗಳನ್ನು ಹೂತುಹಾಕಲಾಗಿದ್ದು, ನಾವು ಎಫ್‌ಎಸ್‌ಎಲ್ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನೂ ಸಹ ಸ್ಥಳಕ್ಕೆ ಕರೆಸಿದ್ದೇವೆ. ಮಾಹಿತಿಯ ಪ್ರಕಾರ, 25-30 ದರೋಕೋರರು ದಾಳಿಯಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಸಾವನ್ನಪ್ಪಿದ ದರೋಡೆಕೋರರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ನೇಪಾಳ ಗಡಿಯಲ್ಲಿ ಘಟನೆ ನಡೆದಿರುವುದರಿಂದ ನಾವು ಅವರ ಫೋಟೋಗಳನ್ನು ಸ್ಥಳೀಯ ಪೊಲೀಸ್ ಠಾಣೆ ಮತ್ತು ನೇಪಾಳ ಪೊಲೀಸರಿಗೆ ಕಳುಹಿಸಿದ್ದೇವೆ" ಎಂದು ಅವರು ಹೇಳಿದರು.
ನೇಪಾಳದ ದರೋಡೆಕೋರರು ಸಾಮಾನ್ಯವಾಗಿ ಭಾರತದ ಗಡಿಯಲ್ಲಿರುವ ಹಳ್ಳಿಗಳ ಮೇಲೆ ದಾಳಿ ಮಾಡುತ್ತಿರುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಏಪ್ರಿಲ್‌ನಲ್ಲಿ, ಪೂರ್ವ ಚಂಪಾರಣ್‌ನಲ್ಲಿ 10 ದಿನಗಳಲ್ಲಿ ಐದು ದರೋಡೆಕೋರರ ದಾಳಿಗಳು ವರದಿಯಾಗಿದ್ದವು. ಸದರ್ ಎಎಸ್ಪಿ ಶ್ರೀರಾಜ್, ಸಿಕರ್ಹಣ ಡಿಎಸ್ಪಿ ಮತ್ತು ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಅವರೊಂದಿಗೆ ಸುಮಾರು 12 ಪೊಲೀಸ್ ಠಾಣೆಗಳ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Weekend Shootings: ನಿಲ್ಲದ ಗುಂಡಿನ ದಾಳಿ.. ಸೈನಿಕ ಸೇರಿ ಆರು ಜನ ಸಾವು; 25ಕ್ಕೂ ಹೆಚ್ಚು ಮಂದಿಗೆ ಗಾಯ!