ನವದೆಹಲಿ: ಕೊರೊನಾದಿಂದ ಮೃತಪಟ್ಟವರ ಘನತೆ ಮತ್ತು ಹಕ್ಕುಗಳನ್ನು ರಕ್ಷಿಸಲು ವಿಶೇಷ ಕಾನೂನು ಜಾರಿಗೊಳಿಸಿ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ಕೇಂದ್ರ ಮತ್ತು ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮೃತಪಟ್ಟವರ ಹಕ್ಕುಗಳನ್ನು ರಕ್ಷಿಸಲು ನಿರ್ದಿಷ್ಟವಾದ ಶಾಸನ ಜಾರಿಗೊಳಿಸುವುದನ್ನು ಒಳಗೊಂಡಿದೆ. ಸಾಮೂಹಿಕ ಸಮಾಧಿ ಅಥವಾ ಶವಸಂಸ್ಕಾರ ಮಾಡಿದರೆ ಮೃತಪಟ್ಟವರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ, ಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ಅನುಮತಿಸಬಾರದು. ಬಾಕಿ ಇರುವ ಬಿಲ್ ಪಾವತಿಯ ಲೆಕ್ಕದಲ್ಲಿ ಯಾವುದೇ ಮೃತದೇಹವನ್ನು ಉದ್ದೇಶಪೂರ್ವಕವಾಗಿ ಉಳಿಸಿಕೊಳ್ಳುವುದನ್ನು ಆಸ್ಪತ್ರೆ ಆಡಳಿತ ನಿಷೇಧಿಸಬೇಕು. ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲಿ ಬಂದ ವಿದ್ಯಮಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಸೂಚನೆ ನೀಡಿದೆ.
ಎನ್‌ಎಚ್‌ಆರ್‌ಸಿ ಶಿಫಾರಸುಗಳು:
ಯಾವುದೇ ಸಾವಿನ ಘಟನೆ ಗಮನಿಸಿದ ನಂತರ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ, ತುರ್ತು ಆ್ಯಂಬುಲೆನ್ಸ್ ಸೇವೆ ಅಥವಾ ಕಾನೂನು ಅಧಿಕಾರಿಗಳಿಗೆ ತಿಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿ ರಾಜ್ಯವು ಜಿಲ್ಲಾವಾರು ಡಿಜಿಟಲ್ ದತ್ತಾಂಶಗಳ ಸಾವಿನ ಪ್ರಕರಣಗಳನ್ನು ನಿರ್ವಹಿಸಬೇಕು. ವ್ಯಕ್ತಿಯ ಸಾವಿನ ಬಗ್ಗೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಏಕಕಾಲದಲ್ಲಿ ನವೀಕರಿಸಬೇಕು.
ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಅನಗತ್ಯ ವಿಳಂಬವಾಗದಂತೆ ಪೊಲೀಸ್ ಇಲಾಖೆ ಖಚಿತಪಡಿಸಿಕೊಳ್ಳಬೇಕು. ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಮೃತರ ಶವವನ್ನು ಸಾಗಿಸಲು ಸಾರಿಗೆ ಸೌಲಭ್ಯಗಳು ಲಭ್ಯವಿರುವುದನ್ನು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಆ್ಯಂಬುಲೆನ್ಸ್ ಶುಲ್ಕವನ್ನು ಅನಿಯಂತ್ರಿತವಾಗಿ ಹೆಚ್ಚಿಸುವುದನ್ನು ತಡೆಯಬೇಕು.
ಎನ್ಜಿಒಗಳು ಅನಾಥ ಶವಗಳ ವಿಧಿ-ವಿಧಾನಗಳನ್ನು ಗೌರವಯುತವಾಗಿ ನಿರ್ವಹಿಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರಬೇಕು. ತಾತ್ಕಾಲಿಕ ಶವಾಗಾರಗಳನ್ನು ಸ್ಥಾಪಿಸಬೇಕು. ದೇಹವನ್ನು ಸ್ಪರ್ಶಿಸುವ ಅಗತ್ಯವಿಲ್ಲದ ಧಾರ್ಮಿಕ ಆಚರಣೆಗಳನ್ನು ಧಾರ್ಮಿಕ ಲಿಪಿಗಳಿಂದ ಓದುವುದು, ಪವಿತ್ರ ನೀರನ್ನು ಚಿಮುಕಿಸುವುದು ಸೇರಿ ಮುಂತಾದವುಗಳನ್ನು ಅನುಮತಿಸಬಹುದು. ದೇಹವನ್ನು ಕುಟುಂಬಕ್ಕೆ ವಾಪಸ್ ಕಳುಹಿಸಲಾಗದ ಸಂದರ್ಭಗಳಲ್ಲಿ ರಾಜ್ಯ ಅಥವಾ ಸ್ಥಳೀಯ ಆಡಳಿತವು ಧಾರ್ಮಿಕ ಅಥವಾ ಸಾಂಸ್ಕೃತಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕೊನೆಯ ವಿಧಿಗಳನ್ನು ನಿರ್ವಹಿಸಬಹುದು.
ಯಾವುದೇ ಸಂದರ್ಭದಲ್ಲೂ ಮೃತದೇಹಗಳನ್ನು ರಾಶಿ ಹಾಕಲು ಅವಕಾಶ ನೀಡಬಾರದು. ವಿದ್ಯುತ್ ಶವಾಗಾರಗಳ ಬಳಕೆ ಪ್ರೋತ್ಸಾಹಿಸಬೇಕು. ಜೊತೆಗೆ ಶವಸಂಸ್ಕಾರ, ಸಮಾಧಿ ಸ್ಥಳಗಳು ಸೇರಿದಂತೆ ಮೃತದೇಹಗಳನ್ನು ನಿರ್ವಹಿಸುವ ಸಿಬ್ಬಂದಿಗೆ ಆದ್ಯತೆಯ ಮೇಲೆ ವ್ಯಾಕ್ಸಿನೇಷನ್ ಜೊತೆಗೆ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು. ಸಂವಿಧಾನದ 21 ನೇ ವಿಧಿಯು ಜೀವನ ಹಕ್ಕು, ನ್ಯಾಯಯುತ ಚಿಕಿತ್ಸೆ ಮತ್ತು ಘನತೆ ಜೀವಂತ ವ್ಯಕ್ತಿಗಳಿಗೆ ಮಾತ್ರವಲ್ಲದೆ ಅವರ ಮೃತದೇಹಗಳಿಗೂ ವಿಸ್ತರಿಸುತ್ತದೆ ಎಂದು ಆಯೋಗ ಶಿಫಾರಸು ಮಾಡಿದೆ.
ಓದಿ: ದೇಶದಲ್ಲಿ ನಿನ್ನೆ 3.26 ಲಕ್ಷ ಹೊಸ ಕೋವಿಡ್ ಕೇಸ್: 3,890 ಮಂದಿ ಸಾವು