ಪುದುಚೇರಿ: ಇಲ್ಲಿನ ಮಣಕ್ಕುಳ ವಿನಯಗರ್ ದೇವಸ್ಥಾನದಲ್ಲಿದ್ದ ಆನೆಯೊಂದು ವಾಕಿಂಗ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದೆ. ಬುಧವಾರ ಬೆಳಗ್ಗೆ 6:30ಕ್ಕೆ ಈ ದುರ್ಘಟನೆ ನಡೆದಿದೆ. ಬಳಿಕ ಆನೆ ಲಕ್ಷ್ಮಿಯನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಅಲ್ಲದೇ ಆನೆಗೆ ಮಧುಮೇಹವಿದ್ದು, ಕಾಲಿನ ಗಾಯದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ.
ಪುದುಚೇರಿಯ ಮಾಜಿ ಸಿಎಂ ಜಾನಕಿರಾಮನ್ ಅವರು 1996ರಲ್ಲಿ, ಐದು ವರ್ಷದ ಈ ಆನೆಯನ್ನು ದೇವಸ್ಥಾನಕ್ಕೆ ನೀಡಿದ್ದರು. ಆನೆ ಲಕ್ಷ್ಮಿ (32) ಭಕ್ತರಿಗೆ ಅತ್ಯಂತ ಹತ್ತಿರವಾಗಿತ್ತು. ಗಣೇಶ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರು ಆನೆ ಲಕ್ಷ್ಮಿಯ ದರ್ಶನ ಪಡೆಯದೇ ಹೋಗುತ್ತಿರಲಿಲ್ಲ.
ಶವಪರೀಕ್ಷೆ ಬಳಿಕ ಇಂದು ಸಂಜೆ ಕುರುಸುಕುಪ್ಪಂ ಅಕ್ಕಸಾಮಿ ಮಠದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ದೇವಾಲಯದ ಬಳಿ ಇರಿಸಲಾಗಿರುವ ಆನೆಯ ಮೃತದೇಹಕ್ಕೆ ಅಪಾರ ಸಂಖ್ಯೆಯ ಜನರು ಅಶ್ರುತರ್ಪಣ ಸಲ್ಲಿಸುತ್ತಿದ್ದಾರೆ. ತೆಲಂಗಾಣ ರಾಜ್ಯಪಾಲರು ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಲಕ್ಷ್ಮಿಗೆ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪ ಮಾಲೀಕತ್ವದ ಗಣೇಶ ಆನೆ ಸಾವು