ಲಾತೇಹಾರ್ (ಜಾರ್ಖಂಡ್): ಇಲ್ಲಿನ ಬೆಟ್ಲಾ ನ್ಯಾಷನಲ್ ಪಾರ್ಕ್ ನಲ್ಲಿ ರಕ್ಷಿಸಿ ಸುರಕ್ಷಿತವಾಗಿ ಇರಿಸಲಾಗಿದ್ದ ಆನೆಮರಿಯೊಂದು ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿಯು ಆನೆಮರಿ ಸರಿಯಾಗಿ ನೋಡಿಕೊಳ್ಳದ್ದಕ್ಕೇ ಅದು ಮೃತಪಟ್ಟಿದೆ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಕಳೆದ ತಿಂಗಳು ಮಂಡಲ್ ಅಣೆಕಟ್ಟೆ ಬಳಿಯ ಕೋಯಲ್ ನದಿಯಿಂದ ಆನೆ ಮರಿಯನ್ನು ರಕ್ಷಿಸಲಾಗಿತ್ತು. ಮರಿ ಆನೆ ಹಿಂಡಿನಿಂದ ಬೇರ್ಪಟ್ಟು ನದಿಗೆ ಬಿದ್ದಿತ್ತು. ಬಳಿಕ ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಆನೆ ಮರಿಯನ್ನು ರಕ್ಷಿಸಿದ್ದ ಅರಣ್ಯ ಇಲಾಖೆ ಬೆಟ್ಲಾ ರಾಷ್ಟ್ರೀಯ ಉದ್ಯಾನದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಆದರೆ, ಈಗ ಆನೆಮರಿ ಸತ್ತಿರುವುದು ಗ್ರಾಮಸ್ಥರಲ್ಲಿ ಭಾರಿ ಆಕ್ರೋಶ ಮೂಡಿಸಿದೆ.
ಹಲವು ದಿನಗಳಿಂದ ಅನಾರೋಗ್ಯ: ಮಾಹಿತಿ ಪ್ರಕಾರ ಕಳೆದ ಕೆಲವು ದಿನಗಳಿಂದ ಆನೆ ಮರಿ ಅನಾರೋಗ್ಯದಿಂದ ಬಳಲುತ್ತಿತ್ತು. ಅರಣ್ಯ ಇಲಾಖೆಯಿಂದ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆನೆ ಮೃತಪಟ್ಟಿದೆ. ಆದರೆ, ಆನೆ ಮರಿಗೆ ಉತ್ತಮ ಚಿಕಿತ್ಸೆ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ರಹಸ್ಯವಾಗಿ ಅಂತ್ಯ ಸಂಸ್ಕಾರಕ್ಕೆ ಯತ್ನ: ಆನೆ ಮರಿ ಸಾವನ್ನಪ್ಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ವಾಹನವೊಂದರಲ್ಲಿ ಆನೆ ಮರಿಯನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದರು. ವಾಹನದಲ್ಲಿ ನಾಲ್ಕೈದು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು. ಈ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿ ವಾಹನವನ್ನು ಸುತ್ತುವರಿದಿದ್ದಾರೆ. ಪ್ರತಿಭಟನೆ ವೇಳೆ ಅರಣ್ಯ ಸಿಬ್ಬಂದಿಯನ್ನು ವಾಹನದಿಂದ ಕೆಳಗಿಳಿಸಿ, ಆನೆ ಮರಿ ಆರೈಕೆಯಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಆನೆಮರಿಯನ್ನು ರಹಸ್ಯವಾಗಿ ಅಂತ್ಯಸಂಸ್ಕಾರ ಮಾಡಲು ಒಯ್ಯಲಾಗುತ್ತಿತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಫಾರೆಸ್ಟ್ ಗಾರ್ಡ್ಗಳೊಂದಿಗೆ ಆಟವಾಡುತ್ತಿತ್ತು: ಬೆಟ್ಲಾ ನ್ಯಾಷನಲ್ ಪಾರ್ಕ್ನಲ್ಲಿದ್ದ ಆನೆಮರಿ ಅಲ್ಲಿನ ಸಿಬ್ಬಂದಿಯೊಂದಿಗೆ ದೋಸ್ತಿ ಮಾಡಿತ್ತು. ಅಲ್ಲಿರುವ ವಂಶಿ ಯಾದವ್ ಎಂಬ ಸಿಬ್ಬಂದಿಯನ್ನೇ ಅದು ತನ್ನ ತಾಯಿಯನ್ನಾಗಿ ಮಾಡಿಕೊಂಡಿತ್ತು. ಅವರೊಂದಿಗೆ ಊಟ, ನಿದ್ರೆ ಹಾಗೂ ಆಟ ಎಲ್ಲವನ್ನೂ ಮಾಡುತ್ತಿತ್ತು. ಆನೆಮರಿಯನ್ನು ನೋಡಿಕೊಳ್ಳಲು ವಂಶಿ ಯಾದವ್ ಮತ್ತು ರಘುನಾಥ್ ಎಂಬ ಇಬ್ಬರನ್ನು ನೇಮಿಸಲಾಗಿತ್ತು.
ಇದನ್ನೂ ಓದಿ: ಅಮ್ಮನ ಜೊತೆ ಬಂದು ದಾರಿ ತಪ್ಪಿ ಕಿರು ಬಾವಿಗೆ ಬಿದ್ದ ಆನೆಮರಿ ರಕ್ಷಣೆ: ವಿಡಿಯೋ ನೋಡಿ..