ಶಾಮ್ಲಿ( ಉತ್ತರಪ್ರದೇಶ): ವಿದ್ಯುತ್ ಸೌಲಭ್ಯವನ್ನೇ ನೀಡದೇ ಗ್ರಾಮದ ಜನರಿಗೆ ಸಾವಿರಾರು ರೂಪಾಯಿಗಳ ಬಿಲ್ ನೀಡಿ ಇಲಾಖೆ ಶಾಕ್ ನೀಡಿದೆ. ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ವಿದ್ಯುತ್ ಇಲಾಖೆಯ ಬೇಜವಾಬ್ದಾರಿತನ ಕಾರಣ ಎಂಬ ಮಾತು ಕೇಳಿ ಬಂದಿದೆ. ಖೋಕ್ಸಾ, ಅಲಾವುದ್ದೀನ್‌ಪುರ, ದುದ್ಲಿ, ಡೇರಾ ಭಾಗೀರಥ್, ನಯಾ ಬನ್ಸ್, ಮಸ್ತಗಢ, ಜತನ್, ಖಾನ್‌ಪುರ, ಅಹಮದ್‌ಗಢ, ಖೇಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಿಸುತ್ತಿರುವ ಬವಾರಿಯಾ ಜನಾಂಗದ ಜನರ ಮನೆಗೆ ಹತ್ತು ವರ್ಷಗಳ ಹಿಂದೆ ಉಚಿತ ವಿದ್ಯುತ್ ಸಂಪರ್ಕದ ಹೆಸರಿನಲ್ಲಿ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಿದ್ದಾರೆ.
ವಿದ್ಯುತ್ ಮೀಟರ್ ಅಳವಡಿಸಿದರೂ, ವಿದ್ಯುತ್ ಸಂಪರ್ಕ ಮಾತ್ರ ಅವರಿಗೆ ಇನ್ನೂ ಕನಸು ಆಗಿ ಉಳಿದಿದೆ. ಆದರೆ, ಇಲಾಖೆ ಮಾತ್ರ ಸಾವಿರಾರು ರೂ ಮೊತ್ತದ ವಿದ್ಯುತ್ ಬಿಲ್ ನೀಡಿದೆ. ಇಲಾಖೆ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಖೋಕ್ಸಾ ಗ್ರಾಮದ ಮಹಿಳೆ ಸರೋಜ ದೇವಿ, ಮೂರು ವರ್ಷಗಳ ಹಿಂದೆ ಉಚಿತ ಸಂಪರ್ಕ ನೀಡುವುದಾಗಿ ಮೀಟರ್ ಅನ್ನು ಅಳವಡಿಸಲಾಗಿದೆ.
ಮನೆಯಲ್ಲಿ ದೊಡ್ಡ (ಅವಿಭಕ್ತ) ಕುಟಂಬ ವಾಸ ಮಾಡುತ್ತಿದ್ದು, ನಾಲ್ಕು ಮೀಟರ್ ಅಳವಡಿಸಲಾಗಿದೆ. ಈಗ ಅವರು ಪ್ರತಿ ಮೀಟರ್ಗೆ 50 ಸಾವಿರ ರೂ ಅನ್ನು ಕಟ್ಟುವಂತೆ ಪದೇ ಪದೇ ಮನೆಗೆ ಭೇಟಿ ನೀಡಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾರು ವಾಸಿಸದ ಒಬ್ಬಂಟಿ ಮನೆಗಳಿಗೂ ಮೀಟರ್ ಅಳವಡಿಸಿ, 50 ಸಾವಿರ ರೂ ಬಿಲ್ ಅನ್ನು ಇಲಾಖೆ ನೀಡಿದೆ ಎಂದು ಖೋಕ್ಸಾ ಗ್ರಾಮದ ಮಾಜಿ ಮುಖ್ಯಸ್ಥ ಭಗತ್ ರಾಮ್ ಆರೋಪಿಸಿದ್ದಾರೆ. ಅಲಾವುದ್ದೀನ್‌ಪುರ ಗ್ರಾಮದ ಸುಂದರವತಿ ದೇವಿ ಈ ಬಗ್ಗೆ ಮಾತನಾಡಿ, 10 ವರ್ಷದ ಹಿಂದೆ, ವಿದ್ಯುತ್ ಇಲಾಖೆಯವರು ಉಚಿತವಾಗಿ ವಿದ್ಯುತ್ ನೀಡುವುದಾಗಿ ಮೀಟರ್ ಅಳವಡಿಸಿದರು. ಇಂದಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಆದರೆ, ಬಿಲ್ ಮಾತ್ರ 40 ಸಾವಿರ ನೀಡಿದ್ದಾರೆ, ನಾವು ಯಾಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ವಿದ್ಯುತ್ ಇಲಾಖೆ ಉಪ ವಿಭಾಗಾಧಿಕಾರಿ ರವಿ ಕುಮಾರ್, ಈ ಘಟನೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಹಳ್ಳಿಗಳಿಗೆ ತಮ್ಮ ತಂಡ ಕಳುಹಿಸಿ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ಈ ಸಂಬಂಧ ಗ್ರಾಮಸ್ಥರೊಂದಿಗೆ ಮಾತನಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ದತ್ತು ಮಕ್ಕಳು ಸಹ ಅನುಕಂಪದ ಆಧಾರದ ಉದ್ಯೋಗಕ್ಕೆ ಅರ್ಹರು ; ಹೈಕೋರ್ಟ್