ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುಖ್ಯ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನೀಡಲಿದೆ. ಇದೇ ವೇಳೆ ಗುಜರಾತ್ ವಿಧಾನಸಭಾ ಚುನಾವಣೆ ಸಹ ಘೋಷಣೆಯಾಗುವ ನಿರೀಕ್ಷೆ ಇತ್ತು. ಆದರೆ, ಚುನಾವಣಾ ಆಯೋಗವು ಗುಜರಾತ್ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿಲ್ಲ.
ಹಿಮಾಚಲ ಪ್ರದೇಶದ ವಿಧಾನಸಭಾ ಅವಧಿಯು ಜನವರಿ 8ಕ್ಕೆ ಮುಕ್ತಾಯವಾಗಲಿದೆ. ಗುಜರಾತ್ ವಿಧಾನಸಭಾ ಅವಧಿಯು ಫೆಬ್ರವರಿ 18ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಎರಡೂ ರಾಜ್ಯಗಳಿಗೂ ಒಟ್ಟಿಗೆ ಚುನಾವಣೆ ನಡೆಯುವ ಹಾಗೂ ಆಯೋಗ ಚುನಾವಣೆಯನ್ನು ಘೋಷಿಸಲಿದೆ ಎಂದು ನಿರೀಕ್ಷೆ ಇತ್ತು.
ಆದರೆ, ಇಂದು ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಕೇವಲ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕ ಮಾತ್ರ ಪ್ರಕಟಿಸಿದರು. ಈ ವೇಳೆ ಗುಜರಾತ್ ಚುನಾವಣಾ ದಿನಾಂಕ ಕುರಿತಾಗಿ ಪ್ರಶ್ನಿಸಿದಾಗ ಅವರು, ಎರಡೂ ರಾಜ್ಯಗಳ ವಿಧಾನಸಭಾ ಮುಕ್ತಾಯದ ಅವಧಿಯು 40 ದಿನಗಳ ಅಂತರ ವಿದೆ. ಆದ್ದರಿಂದ ಒಟ್ಟಿಗೆ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಲು ಆಗಿಲ್ಲ ಎಂದು ತಿಳಿಸಿದರು.
1.86 ಲಕ್ಷ ಮೊದಲ ಬಾರಿ ಮತದಾರರು: ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಸ್ಥಾನಗಳಿಗೆ 55 ಲಕ್ಷಕ್ಕೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 1.86 ಲಕ್ಷ ಮೊದಲ ಬಾರಿ ಮತದಾರರಾಗಿದ್ದು, ಇದರಲ್ಲಿ 1.22 ಲಕ್ಷ ಜನರು 80 ವರ್ಷ ಮೇಲ್ಪಟ್ಟವರು ಎಂದು ಆಯೋಗದ ಆಯುಕ್ತರು ಹೇಳಿದರು.
ಚುನಾವಣೆಗೆ ನಾಮನಿರ್ದೇಶನಗಳ ಸಲ್ಲಿಕೆ ಅಕ್ಟೋಬರ್ 17ರಂದು ಪ್ರಾರಂಭವಾಗಲಿದೆ. ಅಕ್ಟೋಬರ್ 25ರವರೆಗೆ ನಾಮಪತ್ರ ಸಲ್ಲಿಕೆ ಇರಲಿದ್ದು, ಅಕ್ಟೋಬರ್ 29 ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿದೆ. ಒಟ್ಟಾರೆ ಹಿಮಾಚಲ ಪ್ರದೇಶದಲ್ಲಿ 7,881 ಒಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು, ಗುಜರಾತ್ ವಿಧಾನಸಭೆಯು 182 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 92 ಸ್ಥಾನ ಅಗತ್ಯವಾಗಿದೆ. ಅದೇ ರೀತಿ 68 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನ ಬೇಕಾಗುತ್ತದೆ. ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತದಲ್ಲಿ ಇದೆ.
ಇದನ್ನೂ ಓದಿ: ಚೆನ್ನೈ - ಬೆಂಗಳೂರು - ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು