ಜಬಲ್ಪುರ (ಮಧ್ಯ ಪ್ರದೇಶ): ಮಧ್ಯಪ್ರದೇಶದ ಜಬಲ್ಪುರದಲ್ಲಿ ಮಹಿಳೆ ಮತ್ತು ಆಕೆಯ ಮಗ ಹಸಿವಿನಿಂದ ಸಾವನ್ನಪ್ಪಿದ್ದಾರೆ. ಮೃತನನ್ನು 70 ವರ್ಷದ ಗೋಮತಿ ಕೋಲ್ ಮತ್ತು ಆಕೆಯ 55 ವರ್ಷದ ಮಗ ನಾರಾಯಣ್ ಕೋಲ್ ಎಂದು ಗುರುತಿಸಲಾಗಿದೆ.
ಕಳೆದ ಐದು ದಿನಗಳಿಂದ ಅವರು ಹಸಿವಿನಿಂದ ಬಳಲುತ್ತಿದ್ದರು. ಭಾನುವಾರ ಮನೆಯಿಂದ ದುರ್ವಾಸನೆ ಬರಲು ಪ್ರಾರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಗೋಮತಿ ಅವರ ಮಗ ನಾರಾಯಣ್ ಅವರು ಇಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರು. ಗೋಮತಿ ಜನರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆಯ ಮಗ ಈ ಪ್ರದೇಶದಲ್ಲಿ ವಿದ್ಯುತ್ ಕೆಲಸ ಮಾಡುತ್ತಿದ್ದ ಎಂದು ಮೃತರ ಮನೆಯ ಸಮೀಪ ವಾಸಿಸುವ ನಾರಾಯಣ್ ಗುಪ್ತಾ ಹೇಳಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ನಾರಾಯಣ್ ಅವರ ಬಳಿ ಇದ್ದ ಹಣ ಖಾಲಿಯಾಗಿತ್ತು. ಅವರು ಇದ್ದ ಹಣವನ್ನೆಲ್ಲ ಆಹಾರಕ್ಕಾಗಿ ಖರ್ಚು ಮಾಡಿದರು. ಬಳಿಕ ಹಣವಿಲ್ಲದ ಕಾರಣ ಅವರು ತಮ್ಮ ನೆರೆಹೊರೆಯವರ ಬಳಿ ಆಹಾರ ಕೇಳುತ್ತಿದ್ದು, ಸ್ಥಳೀಯರು ಆಹಾರ ನೀಡಿ ಸಹಾಯ ಮಾಡುತ್ತಿದ್ದರು.
ಆದರೆ, ಎರಡು ದಿನಗಳ ಕಾಲ ಮನೆಯ ಬಾಗಿಲು ಮುಚ್ಚಲಾಗಿತ್ತು. ಮನೆಯ ಒಳಗಿನಿಂದ ದುರ್ವಾಸನೆ ಬರಲು ಪ್ರಾರಂಭವಾದಾಗ ನೆರೆಹೊರೆಯವರು ಪುರಸಭೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಮನೆಯ ಬಾಗಿಲು ಒಡೆದಾಗ ತಾಯಿ - ಮಗ ಮೃತಪಟ್ಟಿರುವುದು ತಿಳಿದು ಬಂದಿದೆ.
ಲಾಕ್ಡೌನ್ ಕಾರಣ ಅವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಹಲವು ತಿಂಗಳುಗಳಿಂದ ಅವರಿಗೆ ಪಡಿತರ ದೊರೆಯಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.