ರತ್ಲಂ(ಮಧ್ಯಪ್ರದೇಶ): ದೇಶಾದ್ಯಂತ ಮಹಾಮಾರಿ ಕೊರೊನಾ ಆರ್ಭಟ ಜೋರಾಗಿದ್ದು, ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಕೆಲ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ತಮ್ಮ ಜೀವ ಕೈಚೆಲ್ಲುತ್ತಿದ್ದಾರೆ. ಸದ್ಯ ಅಂತಹ ಘಟನೆವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಕೋವಿಡ್ ಸೋಂಕಿಗೊಳಗಾಗಿದ್ದ ರೋಗಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣಕ್ಕಾಗಿ ಆಸ್ಪತ್ರೆ ಮುಂದೆ ಮಗನ ಮಡಿಲಿನಲ್ಲಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ರತ್ಲಂನಲ್ಲಿ ಈ ಘಟನೆ ನಡೆದಿದೆ. ಉಸಿರಾಟದ ತೊಂದರೆಯಿಂದಾಗಿ ಕೋವಿಡ್ ಸೋಂಕಿತ ರೋಗಿಯನ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಒಂದು ಗಂಟೆಗೂ ಅಧಿಕ ಸಮಯ ಕಾಯ್ದಿರುವ ಕಾರಣ ಆತ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯಕೀಯ ನಿರಾಸಕ್ತಿ ಕಂಡು ಬಂದಿದೆ.
70 ವರ್ಷದ ಓವರ್ಕ್ಲಾಲ್ ಪಟಿದಾರ್ ಕೋವಿಡ್ ಸೋಂಕಿತ ಎಂದು ಗುರುತಿಸಲಾಗಿದೆ. ಆತನನ್ನ ಮಗ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯೊಳಗೆ ಕರೆದುಕೊಳ್ಳಲು ವಿಳಂಬ ಮಾಡಲಾಗಿದೆ. ಹೀಗಾಗಿ ಉಸಿರಾಟದ ಸಮಸ್ಯೆ ಉಂಟಾಗಿ ಮಗನ ಮಡಿಲಿನಲ್ಲಿ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: 16 ವರ್ಷದ ಮಗಳ ಮೃತದೇಹ ಹೊತ್ತು, 35 ಕಿ.ಮೀ. ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ತೆರಳಿದ ತಂದೆ!
ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತದ ಜೊತೆ ಮಾತನಾಡಿರುವ ಮೃತನ ಸಂಬಂಧಿ, ವೈದ್ಯರನ್ನ ಕಳುಹಿಸುವಂತೆ ಮನವಿ ಮಾಡಿದರೂ ಯಾರು ಸಹ ಈಕಡೆ ಗಮನ ಹರಿಸಲಿಲ್ಲ ಎಂದಿದ್ದಾರೆ. ಆದರೆ ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ರೋಗಿ ಅತ್ಯಂತ ಗಂಭೀರ ಸ್ಥಿತಿಗೆ ತಲುಪಿದ ಬಳಿಕ ಇಲ್ಲಿಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಿದ್ರೂ ಸಹ ಫಲಕಾರಿಯಾಗಲಿಲ್ಲ ಎಂದಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಮೃತನ ಸಂಬಂಧಿಕರು ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಾಗಿ ತಿಳಿದು ಬಂದಿದ್ದು, ಪೊಲೀಸರು ಮಧ್ಯಪ್ರವೇಶ ಪರಿಸ್ಥಿತಿ ನಿಯಂತ್ರಿಸಿದ್ದಾರೆ.