ಹೈದರಾಬಾದ್: ಪ್ರತಿ ವರ್ಷ ಜೂನ್ 15 ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು (Elder Abuse Awareness Day) ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಯೋವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ಜನರ ಗಮನ ಸೆಳೆಯುವುದು, ಅವರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವಯಸ್ಸಾದ ಪೋಷಕರನ್ನು ಸರಿಯಾಗಿ ನಡೆಸಿಕೊಳ್ಳದೇ, ವೃದ್ಧಾಶ್ರಮಕ್ಕೆ ಕಳುಹಿಸುವ ಮತ್ತು ಅನೇಕ ರೀತಿಯಲ್ಲಿ ಕಿರುಕುಳ ನೀಡುವಂತಹ ಅನೇಕ ಪ್ರಕರಣಗಳನ್ನು ಕೇಳಲಾಗುತ್ತದೆ. ಇದು ತುಂಬಾ ಹೃದಯ ವಿದ್ರಾವಕವಾಗಿದೆ.
ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಇತಿಹಾಸ: ಈ ದಿನವನ್ನು ಮೊದಲು 15 ಜೂನ್ 2011 ರಂದು ಆಚರಿಸಲಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 2011 ರಲ್ಲಿ UN ರೆಸಲ್ಯೂಶನ್ 66/127 ಅನ್ನು ಅಂಗೀಕರಿಸುವ ಮೂಲಕ ವಿಶ್ವ ಹಿರಿಯ ನಿಂದನೆ ಜಾಗೃತಿ ದಿನವನ್ನು ಅಧಿಕೃತವಾಗಿ ಆಚರಿಸಲಾಯಿತು. ಹಿರಿಯರ ನಿಂದನೆಯನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯಲ್ಲಿ 'ಇಂಟರ್ನ್ಯಾಷನಲ್ ನೆಟ್‌ವರ್ಕ್ ಫಾರ್ ದಿ ಪ್ರಿವೆನ್ಶನ್ ಆಫ್ ಎಲ್ಡರ್ ಅಬ್ಯೂಸ್' ಮತ್ತು 'ವಿಶ್ವ ಆರೋಗ್ಯ ಸಂಸ್ಥೆ' ಜಂಟಿಯಾಗಿ ಈ ದಿನವನ್ನು ಪ್ರಾರಂಭಿಸಿದೆ.
ಹಿರಿಯರ ನಿಂದನೆಯ ಪ್ರಕರಣಗಳು ಹೆಚ್ಚಾಗುತ್ತಿವೆ: ವಿಶ್ವಸಂಸ್ಥೆಯ ಪ್ರಕಾರ, ವಿಶ್ವದ 6 ಹಿರಿಯರಲ್ಲಿ 1 ಜನರು ನಿಂದನೆಗೊಳಗಾಗುತ್ತಾರೆ. ಇದು ದುರಂತ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಡಿಮೆಯಾಗುವ ಬದಲು ಹೆಚ್ಚಾಗುತ್ತವೆ ಎಂದು ಅಂದಾಜಿಸಲಾಗಿದೆ.
ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಉದ್ದೇಶ: ಈ ದಿನದ ಮುಖ್ಯ ಉದ್ದೇಶವು ಪ್ರಪಂಚದಾದ್ಯಂತದ ಜನರಲ್ಲಿ ವೃದ್ಧರ ಉತ್ತಮ ಚಿಕಿತ್ಸೆ, ಅವರ ಉತ್ತಮ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಮತ್ತು ಅವರ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ರಾಷ್ಟ್ರೀಯ 2023 ಸಮೀಕ್ಷೆಯ ವರದಿ: ಹಿರಿಯ ನಾಗರಿಕರಿಗಾಗಿ ಎನ್‌ಜಿಒ ಮತ್ತು ಹೆಲ್ಪ್‌ಏಜ್ ಇಂಡಿಯಾ ತನ್ನ ರಾಷ್ಟ್ರೀಯ 2023 ರ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯು ವಯಸ್ಸಾದ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಆತಂಕಕಾರಿ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಇದು ಶೇಕಡ 16 ರಷ್ಟು ಏರಿಕೆಯಾಗಿದೆ. ದೈಹಿಕ ಹಿಂಸಾಚಾರವು ಶೇಕಡ 50ರಷ್ಟು ಹೆಚ್ಚಾಗಿದೆ. ಅಗೌರವ ಶೇಕಡಾ 46ರಷ್ಟು ಮತ್ತು ಭಾವನಾತ್ಮಕ ಹಾಗೂ ಮಾನಸಿಕ ನಿಂದನೆ ಶೇಕಡ 40ರಷ್ಟಿದೆ ಎಂದು ವರದಿ ಹೇಳಿದೆ.
ಇನ್ನು ಶೇಕಡಾ 40ರಷ್ಟು ಜನರು ತಮ್ಮ ಮಕ್ಕಳಿಂದಲೇ ನಿಂದನೆಗೊಳಗಾಗುತ್ತಿದ್ದಾರೆ. ಸಂಬಂಧಿಕರಿಂದ ಶೇಕಡ 31ರಷ್ಟು ಮತ್ತು ಸೊಸೆಯಿಂದ ಶೇಕಡ 27ರಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ. ಪ್ರತಿಕಾರ ಅಥವಾ ಮತ್ತಷ್ಟು ನಿಂದನೆಯ ಭಯದಿಂದಾಗಿ ನಿಂದನೆಯನ್ನು ಎದುರಿಸುತ್ತಿದ್ದರೂ ಶೇಕಡಾ 18ರಷ್ಟು ವಯಸ್ಸಾದ ಮಹಿಳೆಯರು ಈ ಬಗ್ಗೆ ಬಹಿರಂಗ ಪಡಿಸಲಿಲ್ಲ. ಶೇಕಡ 16 ರಷ್ಟು ಮಹಿಳೆಯರಿಗೆ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಯಾವುದೇ ಅರಿವಿಲ್ಲ ಎಂದು ತೋರುತ್ತದೆ. ಆದರೆ, ಶೇಕಡ 13 ರಷ್ಟು ಜನರು ತಮ್ಮ ಕಾಳಜಿ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.
ಹೆಲ್ಪ್‌ಏಜ್ ವರದಿಯು ಹೆಚ್ಚಿನ ಅನಕ್ಷರತೆ ಮಟ್ಟಗಳು, ಕಡಿಮೆ ಆರ್ಥಿಕ ಭದ್ರತೆ, ಪರಿಹಾರ ಕಾರ್ಯವಿಧಾನಗಳು ಮತ್ತು ಅವರಿಗೆ ಪ್ರಯೋಜನಕಾರಿ ಯೋಜನೆಗಳ ಅರಿವಿನ ಕೊರತೆ ಮತ್ತು ಉದ್ಯೋಗಾವಕಾಶಗಳು ಮತ್ತು ವೈದ್ಯಕೀಯ ರಕ್ಷಣೆಯ ಕೊರತೆಯೊಂದಿಗೆ ವಯಸ್ಸಾದ ಮಹಿಳೆಯರ 'ಸಿದ್ಧತೆ ಮತ್ತು ಅವಲಂಬನೆ'ಯನ್ನು ಸ್ಪಷ್ಟವಾಗಿ ನಿಂದನೆ ಬಗ್ಗೆ ಎತ್ತಿ ತೋರಿಸುತ್ತದೆ ಎಂದು ಹೆಲ್ಪ್‌ಏಜ್ ಇಂಡಿಯಾದ ನೀತಿ ಮತ್ತು ಸಂಶೋಧನೆಯ ಮುಖ್ಯಸ್ಥೆ ಅನುಪಮಾ ದತ್ತಾ ಹೇಳಿದ್ದಾರೆ.
ಸುಮಾರು 56% ನಷ್ಟು ವಯಸ್ಸಾದ ಮಹಿಳೆಯರು ನಿಂದನೆಗೆ ಲಭ್ಯವಿರುವ ಪರಿಹಾರ ಕಾರ್ಯವಿಧಾನಗಳ ಬಗ್ಗೆ ಅರಿವಿನ ಕೊರತೆಯನ್ನು ಹೊಂದಿದ್ದಾರೆ. ಕೇವಲ 15% ರಷ್ಟು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯ ಬಗ್ಗೆ ತಿಳಿದಿರುತ್ತಾರೆ. 78% ವಯಸ್ಸಾದ ಮಹಿಳೆಯರಿಗೆ ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿದಿಲ್ಲ. 18% ವಯಸ್ಸಾದ ಮಹಿಳೆಯರು ತಮ್ಮ ಲಿಂಗದ ಕಾರಣದಿಂದ ತಾರತಮ್ಯವನ್ನು ಎದುರಿಸುತ್ತಿದ್ದಾರೆ. 64% ತಮ್ಮ ವೈವಾಹಿಕ ಸ್ಥಿತಿಯಿಂದ ಅಂದರೆ ವಿಧವೆಯ ಕಾರಣದಿಂದಾಗಿ ಸಾಮಾಜಿಕ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಓದಿ: World Blood Donor Day: ತಪ್ಪು ಕಲ್ಪನೆಗಳಿಂದ ಹೊರಬಂದು ರಕ್ತದಾನಕ್ಕೆ ಮುಂದಾಗಿ: ವೈದ್ಯರ ಸಲಹೆ ಹೀಗಿದೆ..