ಹೈದರಾಬಾದ್: ಇಂದು ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆ ಬಿಗಿ ಭದ್ರತಾ ಕೈಗೊಳ್ಳಲಾಗಿದೆ. ಮತ ಎಣಿಕೆಗೆ ಮುನ್ನ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯ ಪೊಲೀಸರು, ತ್ರಿಪುರಾ ರಾಜ್ಯ ರೈಫಲ್ಸ್ (ಟಿಎಸ್‌ಆರ್) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿವೆ. ಗಸ್ತು ತಿರುಗುವಿಕೆ, ಪ್ರತಿಬಂಡಾಯ ಕಾರ್ಯಾಚರಣೆಗಳು ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನೆರವಿನೊಂದಿಗೆ ಗಡಿಭಾಗದಲ್ಲಿರುವ ಹೊರ ಠಾಣೆಗಳನ್ನು ಬಲಪಡಿಸಲಾಗುತ್ತಿದೆ. ಚುನಾವಣಾ ಪೂರ್ವ ಹಿಂಸಾಚಾರ ಮತ್ತು ಭುಗಿಲೆದ್ದದ್ದನ್ನು ಕಡಿಮೆಗೊಳಿಸಲಾಗಿದ್ದರೂ, ಚುನಾವಣೆಯ ನಂತರದ ಹಂತವು ವಿವಿಧ ಪ್ರಕರಣಗಳಲ್ಲಿ 22 ಎಫ್‌ಐಆರ್‌ಗಳು ದಾಖಲಾಗಿದ್ದವು. ಒಟ್ಟು 20 ಜನರು ಗಾಯಗೊಂಡಿದ್ದು, ಒಬ್ಬರು ಮೃತಪಟ್ಟಿದ್ದರು.
ತ್ರಿಪುರಾದಲ್ಲಿ ಪೊಲೀಸ್ ಸರ್ಪಗಾವಲು: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ದುರ್ಬಲತೆಯನ್ನು ಪರಿಗಣಿಸಿ, ಪೊಲೀಸ್ ಮಹಾನಿರ್ದೇಶಕ ಅಮಿತಾಭ ರಂಜನ್ ಅವರು, ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶಾಂತಿಯುತ ಎಣಿಕೆ ಪ್ರಕ್ರಿಯೆ ಮತ್ತು ನಂತರದ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ದೈನಂದಿನ ಆಧಾರದ ಮೇಲೆ ಸೂಚನೆಗಳನ್ನು ನೀಡುತ್ತಿದ್ದಾರೆ.
ರಾಜಕೀಯ ಪಕ್ಷಗಳ ಸಂಘಟಕರು, ಮುಖಂಡರು, ಅಭ್ಯರ್ಥಿಗಳು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮತ್ತು ಸ್ಥಳೀಯ ಆಡಳಿತ ಮತ್ತು ಪೊಲೀಸರೊಂದಿಗೆ ಸಂಪರ್ಕದಲ್ಲಿರಲು ಖಡಕ್ ಸೂಚನೆ ನೀಡಿದ್ದಾರೆ. ಸಂಚಾರಿ ಗಸ್ತು ತಿರುಗುವಿಕೆ ಕಾರ್ಯವನ್ನು ಸಿಎಪಿಎಫ್, ಟಿಎಸ್‌ಆರ್ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ನಡೆಸುತ್ತಿದ್ದಾರೆ. ವಿಶೇಷವಾಗಿ ಹಿಂಸಾಚಾರದ ಬೆದರಿಕೆ ಇರುವ ಪ್ರದೇಶಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪೊಲೀಸ್ ಹದ್ದಿನ ಕಣ್ಣು: ಅಗರ್ತಲಾ ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ವಾಹನ ಮತ್ತು ಹೋಟೆಲ್ ತಪಾಸಣೆ, ಮದ್ಯ ವಿರೋಧಿ ಕಾರ್ಯಾಚರಣೆ ಮತ್ತು ಕೆಲವು ಕಡೆಗಳಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಎಣಿಕೆ ಕೇಂದ್ರಗಳಿಗೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಮತ್ತು ಸ್ಟ್ರಾಂಗ್ ರೂಂ ನಿರ್ವಹಣೆಗಾಗಿ 24x7 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ನಾಗಾಲ್ಯಾಂಡ್, ಮೇಘಾಲಯದಲ್ಲಿ ಪೊಲೀಸ್ ಬಿಗಿ ಭದ್ರತೆ: ಅಷ್ಟೇ ಅಲ್ಲದೆ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಶಾಂತಿಯುತ ಫಲಿತಾಂಶಕ್ಕಾಗಿ ಪೊಲೀಸ್ ಇಲಾಖೆಯು ವಿಸ್ತಾರವಾದ ಭದ್ರತಾ ಕ್ರಮಗಳನ್ನು ವಹಿಸಿದೆ. 178 ಸ್ಥಾನಗಳಿಗೆ ಸ್ಪರ್ಧಿಸಿರುವ 800 ಅಭ್ಯರ್ಥಿಗಳ ಭವಿಷ್ಯ ಮಾರ್ಚ್ 2 ರಂದು ನಿರ್ಧಾರವಾಗಲಿದೆ.
ಮಾರ್ಗ ಬದಲಾವಣೆ: ಮೇಘಾಲಯದ ನೈಋತ್ಯ ಖಾಸಿ ಹಿಲ್ಸ್‌ನ ಪೊಲೀಸ್ ಅಧೀಕ್ಷಕರು ಮತ ಎಣಿಕೆ ಹಿನ್ನೆಲೆ ಸಿಬ್ಬಂದಿಗೆ ವಾಹನ ವ್ಯವಸ್ಥೆಯನ್ನು ಮಾಡಿದ್ದಾರೆ. ಎಣಿಕೆ ಕೇಂದ್ರಗಳ ಸುತ್ತ ದಟ್ಟಣೆಯನ್ನು ನಿಯಂತ್ರಿಸಲಾಗುತ್ತದೆ. ಮಾವ್ಕಿರ್ವಾಟ್‌ನಿಂದ ಬರುವ ವಾಹನಗಳನ್ನು ಲಾಡ್ ಸಕ್ವಾಂಗ್‌ನಿಂದ ಪಿಂಡೆನ್ಸಕ್ವಾಂಗ್- ಸಕ್ವಾಂಗ್ ಮೂಲಕ ಜಕ್ರೆಮ್ ಮಾರ್ಗಕ್ಕೆ ತಿರುಗಿಸಲಾಗುತ್ತದೆ. ಲಾಡ್ ಸಕ್ವಾಂಗ್‌ನಿಂದ ಡಿಸಿ ಕಚೇರಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಜಕ್ರೆಮ್‌ನಿಂದ ಮೌಕಿರ್‌ವಾಟ್ ಕಡೆಗೆ ಹೋಗುವ ವಾಹನಗಳನ್ನು ಜಕ್ರೆಮ್‌ನಿಂದ ಲೈತ್ಲಾಸಾಂಗ್‌ಗೆ ಪ್ರವೇಶ ನಿರ್ಬಂಧದ ಕಾರಣ, ಲಾಡ್ ಮೌಥಾವ್‌ಪ್ಡಾದಿಂದ ಸಕ್ವಾಂಗ್-ಪಿಂಡೆನ್‌ಸಕ್ವಾಂಗ್ ಮೂಲಕ ಮಾವ್ಕಿರ್‌ವಾಟ್‌ಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಪಾದಚಾರಿ ವಲಯ: ಎಲ್ಲ ಕೊಹಿಮಾ ಜಿಲ್ಲೆಯ ಅಭ್ಯರ್ಥಿಗಳು ಕಾನೂನಿನ ಪ್ರಕಾರ ಫಾರ್ಮ್ 18 ಅಡಿಯಲ್ಲಿ ಎಣಿಕೆ ಏಜೆಂಟರನ್ನು ನೇಮಿಸಬೇಕು. ಪ್ರತಿ ಎಣಿಕೆ ಟೇಬಲ್‌ಗೆ ಒಬ್ಬರು ಮತ್ತು ರಿಟರ್ನಿಂಗ್ ಆಫೀಸರ್ ಟೇಬಲ್‌ಗೆ ಒಬ್ಬರನ್ನು ಸಂಬಂಧಿತ ಚುನಾವಣಾಧಿಕಾರಿಗಳೊಂದಿಗೆ ನೇಮಿಸಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲಿನ 100 ಮೀಟರ್ ಪ್ರದೇಶವನ್ನು "ಪಾದಚಾರಿ ವಲಯ" ಎಂದು ಗೊತ್ತುಪಡಿಸಲಾಗುವುದು. ಅಲ್ಲಿ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಪ್ರವೇಶ: ಅಭ್ಯರ್ಥಿಯು ನೇಮಸಿ ಚುನಾವಣಾ ಏಜೆಂಟ್ ಮತ್ತು ಎಣಿಕೆ ಏಜೆಂಟ್‌ಗಳನ್ನು, ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿ ಅಥವಾ ಚುನಾವಣಾಧಿಕಾರಿಯಿಂದ ಮಾನ್ಯವಾದ ಗುರುತಿನ ಚೀಟಿಯನ್ನು ಹೊಂದಿರುವವರಿಗೆ ಕೇಂದ್ರ ಒಳಗಡೆ ಬರಲು ಅನುಮತಿ ಇರುತ್ತದೆ. ಮತ ಎಣಿಕೆ ಹಾಲ್‌ನಲ್ಲಿ ಫೋನ್‌ಗಳು ಅಥವಾ ಕ್ಯಾಮೆರಾಗಳಂತಹ ಯಾವುದೇ ವೈಯಕ್ತಿಕ ವಸ್ತುಗಳನ್ನು ಅನುಮತಿ ನೀಡುವುದಿಲ್ಲ. ಅಂತಹ ವಸ್ತುಗಳನ್ನು ತಂದರೆ ಕೌಂಟರ್‌ನಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Watch... ಪ್ರತಿಭಟನಾ ನಿರತ ಸರಪಂಚ್ಗಳ ಮೇಲೆ ಲಾಠಿ ಚಾರ್ಜ್