ಮುಂಬೈ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಜಟಾಪಟಿ ನಡೆಯುತ್ತಿದೆ. ಈ ಬೆನ್ನಲ್ಲೇ ಮಹಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿ, 'ಮಹಾರಾಷ್ಟ್ರದ ಒಂದು ಇಂಚು ಭೂಮಿಯನ್ನು ತಮ್ಮ ಸರ್ಕಾರ ಯಾರಿಗೂ ಬಿಟ್ಟು ಕೊಡುವುದಿಲ್ಲ' ಎಂದು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಭಾಗದಲ್ಲಿರುವ ಮರಾಠಿಗರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ರಾಜ್ಯದ ಒಂದು ಇಂಚು ಜಾಗ ಎಲ್ಲಿಯೂ ಹೋಗಲು ಬಿಡುವುದಿಲ್ಲ. 40 ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಇದನ್ನೂ ಓದಿ: ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ
ಇದಕ್ಕೂ ಮೊದಲು ಉಭಯ ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು. 'ಕರ್ನಾಟಕ ಮುಖ್ಯಮಂತ್ರಿಗಳು ಗಡಿ ಸಮಸ್ಯೆಗಳ ಬಗ್ಗೆ ತಮ್ಮ ಹೇಳಿಕೆಯನ್ನು ನೀಡುತ್ತಿದ್ದಾರೆ. ಮಹಾರಾಷ್ಟ್ರದ 40 ಹಳ್ಳಿಗಳ ಮೇಲೆ ಏಕಾಏಕಿ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ. ಆದ್ರೆ, ಅವರ ಕನಸು ಈಡೇರುವುದಿಲ್ಲ. ಅವೆಲ್ಲವೂ ನಮ್ಮ ಹಿಡಿತದಲ್ಲೇ ಇವೆ' ಎಂದಿದ್ದಾರೆ.
ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಪ್ರತಿಕ್ರಿಯಿಸಿ, 2 ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತು ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಸಾಂಗ್ಲಿ ಜಿಲ್ಲೆಯ ಜಟ್ ತಾಲೂಕಿನ ಹಳ್ಳಿಗಳ ಮೇಲೆ ಹಕ್ಕು ಸಾಧಿಸಿದ ನಂತರ ಇದೀಗ ಕರ್ನಾಟಕದ ಮುಖ್ಯಮಂತ್ರಿಗಳು ಅಕ್ಕಲಕೋಟ ಮತ್ತು ಸೊಲ್ಲಾಪುರದಲ್ಲೂ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಬ್ಬರೂ ಕಠಿಣ ಸಂದೇಶ ರವಾನಿಸಬೇಕು. ಜೊತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಗಡಿ ವಿವಾದ.. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಬಗ್ಗೆ ಸರ್ವಪಕ್ಷ ಸಭೆ ಕರೆದು ನಿರ್ಧಾರ: ಸಿಎಂ ಬೊಮ್ಮಾಯಿ
'ಮಹಾರಾಷ್ಟ್ರದ ಯಾವುದೇ ಗ್ರಾಮ ಕರ್ನಾಟಕಕ್ಕೆ ಹೋಗುವುದಿಲ್ಲ. ಬೆಳಗಾವಿ-ಕಾರವಾರ-ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಗ್ರಾಮಗಳನ್ನು ಪಡೆಯಲು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ಹೋರಾಟ ನಡೆಸಲಿದೆ' ಎಂದು ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.
'ಗಡಿ ವಿವಾದ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದ್ದು, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರಾಜಕೀಯ ಉದ್ದೇಶಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತದೆ' ಎಂದು ಸಿಎಂ ಬೊಮ್ಮಾಯಿ ಈ ಹಿಂದೆ ಹೇಳಿದ್ದರು. ನಮ್ಮ ಸರ್ಕಾರವು ಕರ್ನಾಟಕದ ಗಡಿಯನ್ನು ರಕ್ಷಿಸಲು ಸಮರ್ಥವಾಗಿದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ
ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವ ನಿರ್ಣಯ ಅಂಗೀಕರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದ ಬಳಿಕ ಉಭಯ ರಾಜ್ಯಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ.