ಎರ್ನಾಕುಲಂ (ಕೇರಳ): ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾ ಎಂಬಲ್ಲಿ ವಲಸೆ ಕುಟುಂಬದ ಎಂಟು ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ. ಬಾಲಕಿ ತನ್ನ ತಾಯಿಯೊಂದಿಗೆ ಮಲಗಿದ್ದ ವೇಳೆ ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ತಿರುವನಂತಪುರಂನ ಚೆಂಗಲ್ ನಿವಾಸಿ ಕ್ರಿಸ್ಟಲ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಕಾಮುಕ ಆರೋಪಿ ಮನೆಗೆ ನುಗ್ಗಿ ತನ್ನ ತಾಯಿಯೊಂದಿಗೆ ಮಲಗಿದ್ದ ಬಿಹಾರ ಮೂಲದ ಕಾರ್ಮಿಕರೊಬ್ಬರ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿದ್ದಾನೆ. ಈ ವೇಳೆ ಬಾಲಕಿ ಅಳುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ತಡೆಯಲು ಮುಂದಾದ ವೇಳೆ ಅವರನ್ನು ಥಳಿಸಿ ಅಲ್ಲಿಂದ ಬಾಲಕಿಯನ್ನ ಕರೆದೊಯ್ದಿದ್ದಾನೆ. ಬಳಿಕ ಪ್ರತ್ಯಕ್ಷದರ್ಶಿ ಸುಕುಮಾರನ್ ಅವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿ, ನೆರೆಹೊರೆಯವರಿಗೂ ಹೇಳಿದ್ದಾರೆ.
ನೆರೆಹೊರೆಯವರು ಮತ್ತು ಸುಕುಮಾರನ್ ಬಾಲಕಿಯ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ, ಸಮೀಪದ ಗದ್ದೆಯೊಂದರಲ್ಲಿ ಬಾಲಕಿ ಗಾಯಗೊಂಡು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಅಪಹರಿಸಿರುವ ವಿಷಯ ಆಕೆಯ ತಾಯಿಗೆ ತಿಳಿದಿರಲಿಲ್ಲ. ಸ್ಥಳೀಯರು ಗಾಯಗೊಂಡ ಬಾಲಕಿಯೊಂದಿಗೆ ಮನೆಗೆ ಬಂದಾಗ ಘಟನೆ ಬಗ್ಗೆ ತಿಳಿದಿದೆ. ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಆ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಿದ್ದರು. ನಂತರ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಕಂಡು ಆರೋಪಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸುತ್ತುವರೆದಿದ್ದ ಪೊಲೀಸರು ಬಳಿಕ ಆರೋಪಿಯನ್ನ ಬಂಧಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಸದ್ಯ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಅಲುವಾದಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ಮರುಕಳಿಸಿದೆ. ವಲಸೆ ಕಾರ್ಮಿಕರ ಮಕ್ಕಳ ಸುರಕ್ಷತೆಗಾಗಿ ಪೊಲೀಸರು ಹಾಗೂ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದ್ದರೂ ಇಂತಹ ಘಟನೆ ನಡೆಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದಲ್ಲೂ ಇಂತಹದ್ದೇ ಘಟನೆ: ಅಜ್ಜಿಯ ಪಕ್ಕದಲ್ಲಿ ಮಲಗಿದ್ದ ಬಾಲಕಿಯನ್ನು ಅಪರಿಚಿತ ವ್ಯಕ್ತಿ ಅಪಹರಿಸಿ ಸ್ಮಶಾನಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಸ್ಮಶಾನದ ದಾರಿ ಕಡೆಯಿಂದ ಹೋಗುತ್ತಿದ್ದ ಸ್ಥಳೀಯರು ಬಾಲಕಿಯನ್ನು ನಗ್ನ ಸ್ಥಿತಿಯಲ್ಲಿರುವುದು ನೋಡಿ. ಬಾಲಕಿಯ ಹುಡುಕಾಟ ನಡೆಸಿದ್ದ ಕುಟುಂಬಕ್ಕೆ ತಿಳಿಸಿದ್ದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸಿಟಿ ಸ್ಕ್ಯಾನ್ ಲ್ಯಾಬ್ನಲ್ಲಿ ವೃದ್ದೆ ಮೇಲೆ ಲೈಂಗಿಕ ದೌರ್ಜನ್ಯ: ಲ್ಯಾಬ್ ಟೆಕ್ನಿಷಿಯನ್ ಅರೆಸ್ಟ್