ಕೋಝಿಕೋಡ್ (ಕೇರಳ): ಒಂದು ವರ್ಷದ ಮಗು, ಮಹಿಳೆ ಸೇರಿ ಮೂವರ ಮೃತದೇಹ ಕೋಝಿಕೋಡ್‌ನಲ್ಲಿ ಎಲತ್ತೂರ್ ರೈಲ್ವೇ ಸ್ಟೇಷನ್ ಸಮೀಪದ ಹಳಿಯಲ್ಲಿ ಕಳೆದ ರಾತ್ರಿ ದೊರೆತಿದೆ. ವ್ಯಕ್ತಿಯೊಬ್ಬ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹಪ್ರಯಾಣಿಕ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಈ ಮೂವರ ಶವಗಳು ಹಳಿಯಲ್ಲಿ ಪತ್ತೆಯಾಗಿವೆ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿ, "ಭಾನುವಾರ ರಾತ್ರಿ ಮಗು, ಮಹಿಳೆ ಸೇರಿದಂತೆ ಮೂವರ ಮೃತದೇಹ ಸಿಕ್ಕಿದ್ದು, ವಶಕ್ಕೆ ಪಡೆದಿದ್ದೇವೆ. ರೈಲಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಬೆಂಕಿ ಹಚ್ಚಿದ ಬಳಿಕ ಈ ಮೂವರು ನಾಪತ್ತೆಯಾಗಿದ್ದರು" ಎಂದರು.
ರಾತ್ರಿ ಸುಮಾರು 9.45ರ ಹೊತ್ತಿಗೆ ಅಲಪ್ಪುಜಾ-ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್ ರೈಲು ಕೋಝಿಕೋಡ್ ನಗರದ ಕೊರಪ್ಪುಜ ರೈಲು ಸೇತುವೆ ಬಳಿ ತಲುಪಿತ್ತು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ 8 ಮಂದಿ ಇತರೆ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿತ್ತು.
ಈ ಪೈಕಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಕೋಝಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಮೂವರು ಸಣ್ಣ ಸುಟ್ಟ ಗಾಯಗಳೊಂದಿಗೆ ಕೋಝಿಕೋಡ್‌ನ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಪ್ರಯಾಣಿಕರಲ್ಲಿ ತಲಸ್ಸೆರಿಯ ಅನಿಲಕುಮಾರ್, ಪತ್ನಿ ಸಜಿಶಾ, ಮಗ ಅದ್ವೈತ್, ಕಣ್ಣೂರಿನ ರೂಬಿ ಮತ್ತು ತ್ರಿಶೂರಿನ ಪ್ರಿನ್ಸ್ ಎಂದು ಗುರುತಿಸಲಾಗಿದೆ.
ರೈಲ್ವೆ ಮೂಲಗಳ ಪ್ರಕಾರ, ಅಲಪ್ಪುಳ ಕಣ್ಣೂರು ಮುಖ್ಯ ಕಾರ್ಯನಿರ್ವಾಹಕ ಎಕ್ಸ್‌ಪ್ರೆಸ್ ರೈಲಿನ ಡಿ 1 ಬೋಗಿಯಲ್ಲಿ ರಾತ್ರಿ 10:00 ರ ಸುಮಾರಿಗೆ ಘಟನೆ ನಡೆದಿದೆ. ಪ್ರಯಾಣಿಕರು ತುರ್ತು ಸರಪಳಿ ಎಳೆದ ನಂತರ ಆರೋಪಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಇದಕ್ಕೂ ಮುನ್ನ, ಅಪರಿಚಿತ ವ್ಯಕ್ತಿ ತನ್ನ ಸಹ ಪ್ರಯಾಣಿಕ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದ. ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇತರ ಪ್ರಯಾಣಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅವರೂ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಇದನ್ನೂ ಓದಿ: ಬಿಹಾರ: ಮಾಟ ಮಂತ್ರದ ಆರೋಪ.. ಬೆಂಕಿ ಹಚ್ಚಿ ಮಹಿಳೆಯ ಸಜೀವದಹನ
ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಾರ್ಡ್‌ನ ವೈದ್ಯರ ಪ್ರಕಾರ, ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಭವಿಸಿದಾಗ ಅಲಪ್ಪುಳದಿಂದ ಕಣ್ಣೂರಿಗೆ ಹೋಗುವ ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್ ಕೋಝಿಕೋಡ್ ಸೆಂಟ್ರಲ್ ಸ್ಟೇಷನ್‌ನಿಂದ ಹೊರಟು ಎಲತ್ತೂರ್ ಸೇತುವೆ ಬಳಿ ಇತ್ತು. ಆರೋಪಿ ಕೆಂಪು ಅಂಗಿ ಧರಿಸಿದ್ದ ಎಂದು ರೈಲಿನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ.
"ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಜನರು ಆಕೆಯ ಪ್ರಾಣ ಉಳಿಸಲು ಪ್ರಯತ್ನಿಸಿದರು. ಆಗ ಅವರಲ್ಲಿ ಕೆಲವರು ಗಾಯಗೊಂಡರು. ದೊಡ್ಡ ಗಲಾಟೆಯೇ ಸಂಭವಿಸಿತು. ಆಗ ಜನರು ಇತರ ಬೋಗಿಗಳಿಗೆ ಓಡಿ ಹೋದರು" ಎಂದು ಗಿರೀಶ್ ಎಂಬ ಪ್ರಯಾಣಿಕರು ಹೇಳಿದರು.
ರೈಲನ್ನು ಎಲತ್ತೂರಿನಲ್ಲಿ ನಿಲ್ಲಿಸಲಾಗಿದ್ದು, ಅವಘಡದ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. "ಗಾಯಗೊಂಡಿರುವ ಎಲ್ಲಾ ಎಂಟು ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅಗತ್ಯ ತಪಾಸಣೆಯ ನಂತರ ರೈಲನ್ನು ಅದರ ಗಮ್ಯಸ್ಥಾನಕ್ಕೆ ಕಳುಹಿಸಲಾಗಿದೆ" ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಬಸ್‌ಗೆ ಬೆಂಕಿ ಹಚ್ಚಿದ ನಕ್ಸಲರು: ಏ.1ರಂದು ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ನಾರಾಯಣಪುರದಿಂದ ದಾಂತೇವಾಡಕ್ಕೆ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ನಕ್ಸಲರು ಮಲೆವಾಹಿ ಮತ್ತು ಬೋಡ್ಲಿ ನಡುವೆ ರಸ್ತೆಯಲ್ಲಿ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು. ಇದರಿಂದ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅಲ್ಲದೇ, ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೂ ನಾರಾಯಣಪುರದಲ್ಲಿ ನಕ್ಸಲೀಯರು ವಿಧ್ವಂಸಕ ಕೃತ್ಯ ಎಸಗಿದ್ದರು. ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಮೂರು ವಾಹನಗಳನ್ನು ಸುಟ್ಟು ಹಾಕಿದ್ದರು.
ಇದನ್ನೂ ಓದಿ: ಬೇರೆ ಬೇರೆ ಸ್ಥಳದಲ್ಲಿ ಬಸ್‌ಗೆ ಬೆಂಕಿ ಹಚ್ಚಿ, ರಸ್ತೆ ಸ್ಫೋಟಿಸಿದ ನಕ್ಸಲರು