ಲಖನೌ(ಉತ್ತರ ಪ್ರದೇಶ): ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸಾವು-ನೋವಿನ ಜೊತೆಗೆ ಅಪಾರ ನಷ್ಟ ಸಂಭವಿಸಿದೆ. ಹಾಗಾಗಿ ಇಂದು ಮತ್ತು ನಾಳೆ ರಾಜ್ಯದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.
ಗುರುವಾರ ಬೆಳಗ್ಗೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿವೆ. ರಾಯ್ ಬರೇಲಿ, ಲಖನೌ, ಸುಲ್ತಾನ್ಪುರ್, ಅಯೋಧ್ಯೆ ಸೇರಿ ಹಲವು ಜಿಲ್ಲೆಗಳಲ್ಲಿ 10 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಜನರು ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವೆಡೆ ರೈಲ್ವೆ ಮಾರ್ಗಗಳು ಕೂಡ ಜಲಾವೃತವಾಗಿದೆ. ಜೌನ್‌ಪುರ, ಕೌಶಂಬಿ, ಬಾರಾಬಂಕಿಯಂತಹ ಅನೇಕ ಭಾಗಗಳಲ್ಲಿ ಮನೆ ಕುಸಿತದಿಂದ ಸಾವು ನೋವು ಹೆಚ್ಚು ಸಂಭವಿಸಿದೆ ಎಂದು ವರದಿಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಸೆಪ್ಟೆಂಬರ್ ಅಂತ್ಯದವರೆಗೆ ಉತ್ತರ ಭಾರತದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿಲ್ಲ. ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: 2020ರಲ್ಲಿ ಕೋಮು ಗಲಭೆ ಪ್ರಕರಣಗಳು ದ್ವಿಗುಣ: NCRB ವರದಿ
ಸೆಪ್ಟೆಂಬರ್ 18 ರಂದು ಸ್ಮೃತಿ ಉಪ್ವಾನ್ ಲಖನೌದಲ್ಲಿ ನಡೆಯಬೇಕಿದ್ದ ಕಿಸಾನ್ ಸಮ್ಮೇಳನವನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಲಾಗಿದೆ. ಭಾರತದಾದ್ಯಂತ ಸುಮಾರು 20,000 ರೈತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕಾಮೇಶ್ವರ್ ಸಿಂಗ್ ತಿಳಿಸಿದ್ದಾರೆ.