ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ 5 ಹಾಗೂ 10 ರೂಪಾಯಿ ಅಬಕಾರಿ ತೆರಿಗೆ ಇಳಿಕೆ ಮಾಡಿ ದೇಶದ ಜನರಿಗೆ ದೀಪಾವಳಿ ಗಿಫ್ಟ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದೆ.
ಲೀಟರ್ ಅಡುಗೆ ಎಣ್ಣೆ ಬೆಲೆಯಲ್ಲಿ 7 ರೂ.ಯಿಂದ 20 ರೂಪಾಯಿವರೆಗೆ ಕಡಿತ ಮಾಡಲಾಗಿದೆ. ದೇಶದ ಹಲವು ಭಾಗಗಳಲ್ಲಿ 20, 18, 10, 7 ರೂ.ಗಳ ಇಳಿಕೆಯಾಗಿದೆ. ತಾಳೆ ಎಣ್ಣೆ, ಕಡಲೆಕಾಯಿ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ಅಡುಗೆ ಎಣ್ಣೆಗಳ ಬೆಲೆ ಇಳಿಕೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ.
ಮೂಲ ಸುಂಕ ಶೇ.32.5 ರಿಂದ 17.5 ಇಳಿಕೆ
ಕಚ್ಚಾ ಪಾಮ್ ಆಯಿಲ್ ಮೇಲೆ ಶೇ.7.5 ರಷ್ಟು, ಕಚ್ಚಾ ಸೋಯಾಬೀನ್ ಎಣ್ಣೆ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ಶೇ 5ರಷ್ಟು ಸುಂಕ ಕಡಿತ ಮಾಡಲಾಗಿದೆ. ಆರ್‌ಬಿಡಿ ಪಾಮೊಲಿನ್ ತೈಲ, ಸಂಸ್ಕರಿಸಿದ ಸೋಯಾಬೀನ್ ಹಾಗೂ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಪ್ರಸ್ತುತ ಶೇ.32.5 ರಿಂದ 17.5 ಕ್ಕೆ ಇಳಿಸಲಾಗಿದೆ ಎಂದು ಅವರು ವಿವರಿಸಿದರು.
ದೀಪಾವಳಿಗೂ ಮುನ್ನ ದಿನ ನವೆಂಬರ್ 3ರಂದು ರಾತ್ರಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ತೆರಿಗೆ ಕಡಿಮೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಹೊಸ ದರಗಳು ನಿನ್ನೆಯಿಂದ ಜಾರಿಗೆ ಬಂದಿವೆ.