ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳು ಮತ್ತು ಕೇಂದ್ರ ಸರ್ಕಾರದ ಸಮಯೋಚಿತ ಮಧ್ಯಪ್ರವೇಶದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರದಲ್ಲಿ ಕಡಿಮೆ ಆಗುತ್ತಿದೆ ಎಂದು ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ಅಲ್ಲದೇ, ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಈ ತಿಂಗಳ ಆರಂಭದಿಂದ ದೇಶಾದ್ಯಂತ ಶೇಂಗಾ ಎಣ್ಣೆಯನ್ನು ಹೊರತುಪಡಿಸಿ ಎಲ್ಲ ಅಡುಗೆ ಎಣ್ಣೆಗಳ ದರದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಪ್ರತಿ ಕೆಜಿ ಎಣ್ಣೆ ಪ್ಯಾಕೇಟ್ ರೂಪಾಯಿ 150ರಿಂದ 190ರ ದರದಲ್ಲಿ ಮಾರಾಟವಾಗುತ್ತಿದೆ.
ಪ್ರಮುಖ ಅಡುಗೆ ಎಣ್ಣೆ ಕಂಪನಿಗಳಾದ ಅದಾನಿ ವಿಲ್ಮಾರ್ ಮತ್ತು ಮದರ್ ಡೈರಿ ವಿವಿಧ ಬಗೆಯ ಅಡುಗೆ ಎಣ್ಣೆಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಪ್ರತಿ ಲೀಟರ್‌ಗೆ 10ರಿಂದ 15 ರೂ. ಕಡಿಮೆ ಮಾಡಲು ಮುಂದಾಗಿವೆ. ಶೀಘ್ರದಲ್ಲೇ ಹೊಸ ಎಂಆರ್ಪಿಯೊಂದಿಗೆ ಎಣ್ಣೆ ಪ್ಯಾಕೇಟ್ಗಳು ಮಾರುಕಟ್ಟೆಗೆ ಬರಲಿವೆ ಎಂದು ಎರಡೂ ಕಂಪನಿಗಳು ತಿಳಿಸಿವೆ.
ಫಾರ್ಚೂನ್ ಸೂರ್ಯಕಾಂತಿ ಎಣ್ಣೆ ದರ 220ರಿಂದ 210 ರೂ.ಗೆ ಇಳಿಕೆಯಾಗಿದೆ. ಫಾರ್ಚೂನ್ ಸೋಯಾಬೀನ್ ಮತ್ತು ಫಾರ್ಚೂನ್ ಕಚಿ ಘನಿ (ಸಾಸಿವೆ ಎಣ್ಣೆ) ದರ ಪ್ರತಿ ಲೀಟರ್‌ಗೆ 205ರಿಂದ 195 ರೂ.ಗೆ ಕಡಿಮೆ ಮಾಡಲಾಗಿದೆ ಎಂದು ಅದಾನಿ ವಿಲ್ಮಾರ್ ಕಂಪನಿ ಹೇಳಿದೆ.
ಸಾಸಿವೆ ಎಣ್ಣೆ ದರವು ಜೂನ್ 1ರಂದು ಕೆಜಿಗೆ 183.68 ರೂ. ಇತ್ತು. ಜೂನ್ 21ಕ್ಕೆ ಇದರ 180.85 ರೂ.ಗೆ ಕಡಿಮೆಯಾಗಿದೆ. ವನಸ್ಪತಿ ಬೆಲೆ ಕೆಜಿಗೆ 165 ರೂ. ಇದೆ. ಸೋಯಾ ಎಣ್ಣೆಯ ಬೆಲೆ 169.65ರಿಂದ 167.67 ರೂ.ಗೆ ಸ್ವಲ್ಪ ತಗ್ಗಿದೆ. ಸೂರ್ಯಕಾಂತಿ ಎಣ್ಣೆ ದರ ಕೆಜಿಗೆ 193ರಿಂದ 189.99 ರೂ.ಗೆ ಇಳಿಕೆಯಾಗಿದೆ. ತಾಳೆ ಎಣ್ಣೆ ದರ ಕೂಡ 156.4ರಿಂದ 152.52 ರೂ.ಗೆ ಇಳಿದಿದೆ. ಖಾದ್ಯ ಎಣ್ಣೆ ಮಾತ್ರವಲ್ಲದೇ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಸ್ಥಿರವಾಗಿದೆ.
ಇದನ್ನೂ ಓದಿ: ರೆಪೋ ದರ ಏರಿಕೆ.. ಠೇವಣಿದಾರರಿಗೆ ಬಂಪರ್.. FD ಮೇಲೆ ಎಷ್ಟು ಬಡ್ಡಿ ಸಿಗುತ್ತಾ ಗೊತ್ತಾ?