ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಎರಡನೇ ಸುತ್ತಿನ ವಿಚಾರಣೆಯ ನಂತರ, ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸತತ ಮೂರನೇ ದಿನವೂ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಮೂರು ಸದಸ್ಯರ ತಂಡ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದೆ. ಸೋಮವಾರ ಅವರ ವಿಚಾರಣೆ ರಾತ್ರಿ 9 ಗಂಟೆ ಸುಮಾರಿಗೆ ಮುಕ್ತಾಯವಾಗಿತ್ತು. ಆದರೆ, ಅವರು ತಮ್ಮ ಹೇಳಿಕೆಗಳಲ್ಲಿ ಕೆಲವು ವಿಷಯಗಳನ್ನು ಸರಿಪಡಿಸಲು ಬಯಸಿದ್ದರು ಎಂದು ವರದಿಯಾಗಿದೆ. ಬಳಿಕ ಅವರನ್ನು ಇಡಿ ಅಧಿಕಾರಿಗಳು ಹಲವಾರು ಗಂಟೆಗಳ ಕಾಲ ಪ್ರಶ್ನಿಸಿದರು. ಮೂರು ಗಂಟೆಗಳ ನಂತರ ಅವರಿಗೆ ಊಟದ ವಿರಾಮ ನೀಡಲಾಗಿತ್ತು. ಬಳಿಕ ತಡರಾತ್ರಿಯವರೆಗೂ ಮತ್ತೆ ಪ್ರಶ್ನಿಸಲಾಯಿತು.
ವಿಚಾರಣೆ ಇನ್ನೂ ಅಪೂರ್ಣವಾಗಿದ್ದು, ಮಂಗಳವಾರ ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಕೋಲ್ಕತ್ತಾ ಮೂಲದ ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ ಕೆಲವು ವಹಿವಾಟಿನ ಬಗ್ಗೆ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಲಾಯಿತು. ಈ ಬಗ್ಗೆ ಸೋನಿಯಾ ಗಾಂಧಿ ಅವರಿಗೂ ಸಮನ್ಸ್ ನೀಡಲಾಗಿದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: 10 ತಾಸು ರಾಹುಲ್ಗೆ ಇಡಿ ಡ್ರಿಲ್... ಇಂದೂ ವಿಚಾರಣೆ ಸಾಧ್ಯತೆ
ಇತ್ತ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಒಂದೆಡೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಹೈಡ್ರಾಮಾ ಆಗಿತ್ತು. ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ದೇಶದ ಹಲವೆಡೆ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಇಡಿ ಮುಂದೆ ಮತ್ತೆ ಹಾಜರಾದ ರಾಹುಲ್ ಗಾಂಧಿ.. ವಿಚಾರಣೆ ಮುಂದುವರಿಕೆ